ಅಮೆರಿಕದಲ್ಲಿ ಆಪ್ತರಿದ್ದರೆ ನಿಷೇಧಿತ ದೇಶಗಳ ನಿವಾಸಿಗಳಿಗೆ ವೀಸಾ

Update: 2017-06-29 15:08 GMT

ವಾಶಿಂಗ್ಟನ್, ಜೂ. 29: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ವೀಸಾ ಅರ್ಜಿದಾರರರು ಮತ್ತು ಎಲ್ಲ ನಿರಾಶ್ರಿತರಿಗೆ ಅಮೆರಿಕ ಹೊಸ ಶರತ್ತೊಂದನ್ನು ವಿಧಿಸಿದೆ. ಅದರ ಪ್ರಕಾರ, ಅಮೆರಿಕದಲ್ಲಿ ಆಪ್ತ ಕುಟುಂಬ ಸದಸ್ಯರು ಇರುವವರು ಅಥವಾ ವ್ಯಾಪಾರ ಬಾಂಧವ್ಯವಿರುವವರು ಮಾತ್ರ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಂಗಳುಗಳ ಹಿಂದೆ ಹೊರಡಿಸಿರುವ ಆದೇಶದ ಹಲವು ಅಂಶಗಳಿಗೆ ಅಮೆರಿಕದ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಆದೇಶ ವಾಸ್ತವವಾಗಿ ಮುಸ್ಲಿಮ್ ನಿಷೇಧವಾಗಿದೆ ಎಂದು ಆರೋಪಿಸಿ ವಿಶ್ವಾದ್ಯಂತ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿರುವುದನ್ನು ಸ್ಮರಿಸಬಹುದಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಇರಾನ್, ಯಮನ್, ಲಿಬಿಯ, ಸಿರಿಯ, ಸುಡಾನ್ ಮತ್ತು ಸೊಮಾಲಿಯ- ಈ ಆರು ಮುಸ್ಲಿಮ್ ಪ್ರಾಬಲ್ಯದ ದೇಶಗಳ ನಾಗರಿಕರು ಅಮೆರಿಕದ ವೀಸಾಗಳಿಗೆ ಅರ್ಜಿ ಹಾಕುವಾಗ ಅಮೆರಿಕದಲ್ಲಿ ತಂದೆ ಅಥವಾ ತಾಯಿ, ಗಂಡ ಅಥವಾ ಹೆಂಡತಿ, ಮಗು, ವಯಸ್ಕ ಮಗ ಅಥವಾ ಮಗಳು, ಅಳಿಯ, ಸೊಸೆ ಅಥವಾ ಸಹೋದರ-ಸಹೋದರಿಯರು ಇದ್ದಾರೆಂಬುದನ್ನು ಸಾಬೀತುಪಡಿಸಬೇಕಾಗುತ್ತದೆ.

ನೂತನ ನಿಯಮಾವಳಿಗಳನ್ನು ಅಮೆರಿಕದ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳಿಗೆ ಬುಧವಾರ ಕಳುಹಿಸಲಾಗಿದೆ.

ಅಜ್ಜ-ಅಜ್ಜಿ, ಮೊಮ್ಮಕ್ಕಳು, ಚಿಕ್ಕಮ್ಮಂದಿರು-ಅತ್ತೆಯಂದಿರು, ಚಿಕ್ಕಪ್ಪ-ಚಿಕ್ಕಮ್ಮಂದಿರು, ಸೋದರ ಸೊಸೆಯಂದಿರುವ, ಸೋದರ ಅಳಿಯಂದಿರು, ಸೋದರ ಸಂಬಂಧಿಗಳು, ಭಾವಂದಿರು ಮತ್ತು ಅತ್ತಿಗೆಯರು, ಪ್ರಿಯಕರರು ಹಾಗೂ ಇತರ ದೂರದ ಸಂಬಂಧಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

 ಟ್ರಂಪ್ ಆಡಳಿತದ ಪ್ರಯಾಣ ನಿಷೇಧವನ್ನು ತಪ್ಪಿಸಲು ಈ ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ಸಂದರ್ಶಕರು ಪೂರೈಸಬೇಕಾದ ಮಾನದಂಡಗಳನ್ನು ವಿದೇಶಾಂಗ, ಕಾನೂನು ಮತ್ತು ಆಂತರಿಕ ಭದ್ರತೆ ಇಲಾಖೆಗಳ ಹಿರಿಯ ಅಧಿಕಾರಿಗಳು ಅಂತಿಮಗೊಳಿಸುತ್ತಿದ್ದಾರೆ.

 ಈ ವಾರದ ಆದಿಭಾಗದಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಟ್ರಂಪ್ ಆದೇಶದ ಕೆಲವು ಭಾಗಗಳಿಗೆ ಅನುಮೋದನೆ ನೀಡಿದೆ. ಅದಕ್ಕೂ ಮೊದಲು, ಕೆಳ ನ್ಯಾಯಾಲಯಗಳು ಈ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಅಮೆರಿಕದ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ವೀಸಾ ಅರ್ಜಿದಾರರು ಆಪ್ತ ಸಂಬಂಧವನ್ನು ಹೊಂದಿದ್ದರೆ, ಅವರಿಗೆ ಪ್ರಯಾಣ ನಿಷೇಧ ಆದೇಶ ಅನ್ವಯವಾಗುವುದಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News