×
Ad

ಸ್ತ್ರೀಶಕ್ತಿ, ಯುವಶಕ್ತಿಗಿಂತ ಮಿಗಿಲಾದ ಶಕ್ತಿ ಇಲ್ಲ: ಪ್ರಮೋದ್

Update: 2017-06-29 20:50 IST

ಉಡುಪಿ, ಜೂ.29: ರಾಜ್ಯ ಸರಕಾರ ತಾಯಂದಿರು ಮತ್ತು ಮಕ್ಕಳನ್ನು ಬಲಪಡಿಸಲು ಅನ್ನಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯದಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸ್ತ್ರೀಯರಿಗೆ ವಿಶೇಷ ಶಕ್ತಿ ನೀಡಲು ಸರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಗುರುವಾರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ/ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಹಂದಾಡಿ ಗ್ರಾಪಂ ಬಳಿಯ ಗಾಂಧಿ ಮೈದಾನ ದಲ್ಲಿ ಉಡುಪಿ ತಾಲೂಕು ಸ್ತ್ರೀಶಕ್ತಿ ಭವನ ಮಾರುಕಟ್ಟೆ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ. ಇದರಿಂದ ಸಮಾಜ ಬಲಿಷ್ಠವಾಗುತ್ತದೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಭವನದ ಪಕ್ಕದಲ್ಲೇ 6.5 ಎಕರೆ ವಿಸ್ತೀರ್ಣದ ಗಾಂಧಿ ಮೈದಾನವಿದ್ದು, ತಮ್ಮ ಅಧಿಕಾರ ಅವಧಿಯಲ್ಲೇ ಇದನ್ನು ಯುವಜನ ಮತ್ತು ಕ್ರೀಡಾ ಇಲಾಖೆ ಸುಪರ್ದಿಗೆ ಪಡೆದು ಯುವಕರಿಗಾಗಿ ಉತ್ತಮ ಕ್ರೀಡಾಂಗಣವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

2.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ತ್ರೀಶಕ್ತಿ ಭವನ ಸ್ತ್ರೀಯರಲ್ಲಿ ಶಕ್ತಿ ತುಂಬುವ ಭವನವಾಗಲಿ ಎಂದವರು ಹಾರೈಸಿದರು.

ಉಡುಪಿ ಜಿಪಂ ಉಪಾಧ್ಯಕ್ಷ ಶೀಲಾ ಕೆ ಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಹಂದಾಡಿ ಗ್ರಾಪಂ ಅಧ್ಯಕ್ಷೆ ಪ್ರತಿಮಾ ಶೆಟ್ಟಿ., ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಉಡುಪಿ ತಾಪಂ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ದಿನಕರ ಹೇರೂರು, ಕುಸುಮಾ ಪೂಜಾರಿ, ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್ ಉಪಸ್ಥಿತರಿದ್ದರು.

ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸ್ವಾಗತಿಸಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News