ನಾಲ್ವರು ರೈತರು ಆತ್ಮಹತ್ಯೆಗೆ ಶರಣು: ಮದ್ಯಪ್ರದೇಶದಲ್ಲಿ ರೈತರ ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಭೋಪಾಲ್, ಜೂ. 29: ಕೃಷಿ ಬಿಕ್ಕಟ್ಟಿಗೆ ಒಳಗಾದ ಮಧ್ಯಪ್ರದೇಶದಲ್ಲಿ ಕಳೆದ ಒಂದು ತಿಂಗಳಲ್ಲೇ 40ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿರುವಂತೆಯೇ ರಾಜ್ಯದಲ್ಲಿ ನಿನ್ನೆಯಿಂದ ನಾಲ್ಕು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ತವರು ಜಿಲ್ಲೆಯಾದ ಸಿಹೋರೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಡ್ಸೌರ್ ಹಾಗೂ ಹೊಶಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿಹೋರ್ ಜಿಲ್ಲೆಯ ಇಮ್ಲಿಖೇಡ ಗ್ರಾಮದ ತನ್ನ ಹೊಲದಲ್ಲಿರುವ ಮರದ ಕೊಂಬೆಗೆ 55ರ ಹರೆಯದ ಮಹಾರಿಯಾ ಬರೇಲಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಹೋರ್ ಜಿಲ್ಲೆಯ ಬಡ್ನಗರ್ ಗ್ರಾಮದಲ್ಲಿ 45ರ ಹರೆಯದ ರೈತ ಜಗದೀಶ್ ಚೌಧುರಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಸೌರ್‌ನ ಬರ್ಡಿಯಾ ಪುನಾ ಗ್ರಾಮದಲ್ಲಿ 65ರ ಹರೆಯದ ಭಗವಾನ್ ಮೇಘ್ವಾಲಂ ತನ್ನ ಹೊಲದಲ್ಲಿರುವ ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಶಂಗಾಬಾದ್ ಜಿಲ್ಲೆಯ ಸಂಡಿಯಾ ಗ್ರಾಮದಲ್ಲಿ 53ರ ಹರೆಯದ ಗುಲಾಬ್ ಸಿಂಗ್ ತನ್ನ ಹೊಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.