ಕುತ್ಪಾಡಿ ಪಡುಕೆರೆ ಕಡಲ್ಕೊರೆತ: ಸಚಿವ ಪ್ರಮೋದ್ ಪರಿಶೀಲನೆ

Update: 2017-06-29 16:36 GMT

ಉಡುಪಿ, ಜೂ.29: ಈ ಬಾರಿ ಹೊಸತಾಗಿ ಕಡಲ್ಕೊರೆತ ಕಂಡುಬಂದಿರುವ ಕುತ್ಪಾಡಿ ಪಡುಕೆರೆ ಪ್ರದೇಶಕ್ಕೆ ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಭೇಟಿ ನೀಡಿ ಹಾನಿಯನ್ನು ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಈವರೆಗೆ ಉದ್ಯಾವರ ಪಡುಕೆರೆ ಕನಕೋಡ ಎಂಬಲ್ಲಿ ಸಂಭವಿಸುತ್ತಿದ್ದ ಕಡಲ್ಕೊರೆತ ಈ ಬಾರಿ ಕುತ್ಪಾಡಿ ಪಡುಕೆರೆಗೆ ವರ್ಗಾ ವಣೆಗೊಂಡಿದೆ. ಇಲ್ಲಿನ ಕಾಂಕ್ರೀಟ್ ರಸ್ತೆಯ ಅಡಿ ಭಾಗದ ಮರಳು ಸಮುದ್ರ ಪಾಲಾಗಿದೆ. ಜಿಲ್ಲಾಧಿಕಾರಿಗೆ ನೀಡಿದ ಸೂಚನೆಯಂತೆ ತಕ್ಷಣದಿಂದ ಈ ಭಾಗದ ಸಮುದ್ರಕ್ಕೆ ಕಲ್ಲು ಹಾಕುವ ಕೆಲಸ ಮಾಡಲಾಗುತ್ತಿದೆ. ಈವರೆಗೆ 120 ಮೀಟರ್ ಉದ್ದದಲ್ಲಿ ಸುಮಾರು 25-30ಲಕ್ಷ ರೂ. ವೆಚ್ಚದಲ್ಲಿ 145ಲೋಡ್ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಇನ್ನು ಕೂಡ ಕಲ್ಲು ಹಾಕ ಬೇಕಾಗಿದೆ. ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಪ್ರಾಕೃತಿಕ ವಿಕೋಪ ನಿರ್ವಹಣೆಯ ಉಸ್ತುವಾರಿಯಾಗಿರುವ ಕಂದಾಯ ನಿರ್ದೇಶಕ ರಾಜಕುಮಾರ್ ಕತ್ರಿ ಜೊತೆ ಮಾತನಾಡಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಹಣ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳುವಂತೆ ತಿಳಿಸಿದ್ದೇನೆ. ಅದೇ ರೀತಿ ಇಲ್ಲಿನ ಕಾಂಕ್ರೀಟ್ ರಸ್ತೆಯನ್ನು ದುರಸ್ತಿ ಮಾಡಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ತಡೆಗೋಡೆ ನಿರ್ಮಿಸುವ ಬಗ್ಗೆ ಎಡಿಬಿ ಯೋಜನೆಯಡಿ 90 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಇದು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಇದರಲ್ಲಿ ಕನಕೋಡದಿಂದ ಕುತ್ಪಾಡಿ ಪಡುಕೆರೆವರೆಗೆ 200 ಮೀಟರ್ ಉದ್ದದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಮಾಜಿ ಸದಸ್ಯ ದಿವಾಕರ ಕುಂದರ್, ನಗರ ಸಭೆ ಸದಸ್ಯರಾದ ರಮೇಶ್ ಕಾಂಚನ್, ಯುವರಾಜ್, ಬಂದರು ಇಲಾಖೆಯ ಮುಖ್ಯ ಇಂಜಿನಿಯರ್ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News