ಮಠದ ಆವರಣದಲ್ಲಿ ನಮಾಝ್ ಮಾಡಿದ್ದು ತಪ್ಪಲ್ಲ: ಪೇಜಾವರ ಶ್ರೀ
ಉಡುಪಿ, ಜೂ.29: ರಾಮ ಮಂದಿರಕ್ಕೆ ಸಂಬಂಧಿಸಿ ನಡೆದ ಸಂಧಾನದಲ್ಲಿ ಮಂದಿರದೊಳಗೆ ವಾರಕ್ಕೊಮ್ಮೆ ನಮಾಝಿಗೆ ಅವಕಾಶ ನೀಡಲು ತೀರ್ಮಾನ ವಾಗಿತ್ತು. ರಾಮಮಂದಿರದೊಳಗೆ ನಮಾಜು ಮಾಡಲು ಅವಕಾಶ ನೀಡುವಾಗ ಕೃಷ್ಣಮಠದ ಹೊರ ಆವರಣದಲ್ಲಿ ನಮಾಝಿಗೆ ಅವಕಾಶ ಕೊಟ್ಟದ್ದು ಹೇಗೆ ತಪ್ಪಾಗುತ್ತದೆ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಆರೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಅವರು ಇಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಈ ರೀತಿ ಉತ್ತರ ನೀಡಿದರು.
ದಶಕಗಳ ಹಿಂದೆ ಎರಡು ಧರ್ಮೀಯರ ನಡುವೆ ಈ ಸಂಧಾನ ನಡೆದಿತ್ತು. ಆಗ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದರು. ಅದಕ್ಕೆ ನನಗೂ ಆಹ್ವಾನವಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲೀಮರು ಒಪ್ಪಿದ್ದರು. ಆದರೆ ವಾರದಲ್ಲಿ ಒಂದು ದಿನ ಮಂದಿರದೊಳಗೆ ನಮಾಝಿಗೆ ಅವಕಾಶ ನೀಡುವಂತೆ ಕೋರಿದ್ದರು. ಮುಸ್ಲಿಮರು ಪ್ರಾರ್ಥನೆ ಮಾಡಿದರೆ ಅದು ಹಿಂದೂಗಳ ನಿಂದನೆಯಾಗುವುದಿಲ್ಲ ಎಂದರು. ಈ ವಿವಾದದಿಂದ ವಿಶ್ವಹಿಂದೂ ಪರಿಷತ್ ಮತ್ತು ನನ್ನ ಸಂಬಂಧಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಸಂಘಪರಿವಾರದವರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಅವರಿಗೆ ಈ ವಿಚಾರದಲ್ಲಿ ಸಮಾಧಾನವೂ ಇಲ್ಲ. ವಿರೋಧವೂ ಇಲ್ಲ ಎಂದಿದ್ದಾರೆ ಎಂದು ಪೇಜಾವರ ಸ್ವಾಮೀಜಿ ತಿಳಿಸಿದರು.
ಹಿಂದೂಗಳು ಕೂಡ ಗೋ ಮಾಂಸ ಸೇವಿಸುತ್ತಾರೆ ಎಂಬ ಹೇಳಿಕೆ ನೀಡಿರುವ ಪೇಜಾವರ ಶ್ರೀ ಕ್ಷಮೆಯಾಚಿಸಬೇಕು ಎಂದು ಮತಾಲಿಕ್ ಆಗ್ರಹಿಸಿರುವ ಕುರಿತ ಕೇಳಿದ ಪ್ರಶ್ನೆಗೆ, ಮುತಾಲಿಕ್ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಅರಿವು ಇದ್ದೇ ಈ ಹೇಳಿಕೆ ನೀಡಿದ್ದೇನೆ. ಯಾರು ಮಾಡ್ತಾರೆ ಅಂತ ಹೇಳಲಾರೆ ಎಂದು ಸ್ವಾಮೀಜಿ ಹೇಳಿದರು.