×
Ad

ಹೊಂಡಗುಂಡಿಗಳ ರಸ್ತೆಯ ದುರಸ್ಥಿಗಾಗಿ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಒತ್ತಾಯ

Update: 2017-06-29 22:52 IST

ಬಂಟ್ವಾಳ, ಜೂ. 29: ಹೊಂಡಗುಂಡಿಗಳು ಬಿದ್ದು ಸಂಪೂರ್ಣ ಕೆಸರುಮಯವಾಗಿ ಸಂಚಾರಕ್ಕೆ ಆಯೋಗ್ಯವಾಗಿರುವ ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ದುರಸ್ಥಿ ಕೈಗೊಳ್ಳದಿರುವ ಬಗ್ಗೆ ಗುರುವಾರ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಅಧ್ಯಕ್ಷರ ಅನುಮತಿಯ ಮೇರೆಗಿನ ಚರ್ಚೆಯ ವೇಳೆ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಬಿ.ಮೋಹನ್, ವಾಸು ಪುಜಾರಿ, ಪ್ರವೀಣ್ ಬಿ., ಗಂಗಾಧರ್, ಬಿ.ಸಿ.ರೋಡ್‌ನ ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯ ವಿಳಂಬ ನೀತಿಯೇ ಕಾರಣ. ಈ ವಿಚಾರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಗಮನಹರಿಸುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯ ಮುಹಮ್ಮದ್ ಶರೀಫ್, ಸದಾಶಿವ ಬಂಗೇರ, ಅಧ್ಯಕ್ಷ ರಾಮಕ್ರಷ್ಣ ಆಳ್ವ ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ, ಮೆಸ್ಕಾಂ ಕಂಬಗಳನ್ನು ಸ್ಥಳಾಂತರಿಸದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಕಂಬಗಳನ್ನು ತೆರವುಗೊಳಿಸಿದರೆ ರಸ್ತೆ ದುರಸ್ಥಿಗೊಳಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರಲ್ಲದೆ, ಈ ವಿಚಾರದಲ್ಲಿ ರಾಜಕೀಯ ಬೇಡ. ರಸ್ತೆ ದುರಸ್ಥಿಗಾಗಿ ಪುರಸಭೆಯ ಎಲ್ಲ 23 ಸದಸ್ಯರೂ ಒಟ್ಟಾಗಿ ಧರಣಿ ಕೂರಲೂ ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸರ್ವ ಸದಸ್ಯರೂ ಎದ್ದುನಿಂತು ಧರಣಿ ಕೂರಲು ದಿನಾಂಕ ನಿಗದಿಪಡಿಸಿ ಎಂದು ದೇವದಾಸ ಶೆಟ್ಟಿಯನ್ನು ಕೇಳಿಕೊಂಡರು. ನೀವೆ ದಿನಾಂಕ ನಿಗದಿಪಡಿಸಿ ಎಂದು ದೇವದಾಸ ಶೆಟ್ಟಿ ಹೇಳಿದಾಗ ಸಭೆಯಲ್ಲಿ ಗದ್ದಲ ಹೆಚ್ಚಾಗಿ ಯಾರ ಮಾತು ಅರ್ಥವಾಗದಂತಾಯಿತು. ಕೊನೆಗೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಬಯಲು ಶೌಚಾಲಯ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬಯಲು ಶೌಚಾಲಯ ಇನ್ನೂ ಇದೆ. ಪುರಸಭೆ ಬಯಲು ಶೌಚಾಲಯ ಮುಕ್ತ ಪ್ರದೇಶವಾಗಿದೆ ಎಂದು ಬರೆದುಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಸದಾಶಿವ ಬಂಗೇರ ಸ್ಪಷ್ಟಪಡಿಸಿದರು.

ನನ್ನ ವಾರ್ಡಿನಲ್ಲೇ ಶೌಚಾಲಯಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲ. ಹೊರರಾಜ್ಯಗಳಿಂದ ಬಂದ ಕಾರ್ಮಿಕರು ಬಯಲು ಶೌಚಾಲಯಕ್ಕೆ ಕಾರಣಕರ್ತರಾಗಿದ್ದಾರೆ ಎಂಬ ವಾಸ್ತವ ಅಂಶಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಈಗಿರುವ ಶೌಚಾಲಯಗಳು ಎಷ್ಟರಮಟ್ಟಿಗೆ ನಿರ್ವಹಿಸಲ್ಪಡುತ್ತಿವೆ ಎಂಬ ಕುರಿತ ಚರ್ಚೆಗಳು ನಡೆದವು. ವಾಸು ಪೂಜಾರಿ ಮಾತನಾಡಿ, ರಕ್ತೇಶ್ವರಿ ದೇವಸ್ಥಾನ ಪಕ್ಕವಿರುವ ಪುರಸಭೆ ಕಟ್ಟಡ ಸಮೀಪ ಶೌಚಾಲಯಕ್ಕೆಂದು ಹಣ ನಿಗದಿಯಾಗಿದ್ದರೂ ನಿರ್ಮಿಸಲಿಲ್ಲ. ಅಲ್ಲಿ ನಾಗನಡೆ ಇದೆ ಎಂದು ಗೋಡೆ ಬರಹ ಇದೆ. ಆದರೆ ಅಲ್ಲೇ ಮೂತ್ರವಿಸರ್ಜನೆ ಮಾಡಲಾಗುತ್ತಿದೆ ಎಂದು ಗಮನ ಸೆಳೆದರು.

ಮಿನಿ ವಿಧಾನಸೌಧ ಬಳಿ ಇರುವ ಶೌಚಾಲಯ ನಿರ್ವಹಣೆಯಾಗುತ್ತಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ ದೂರಿದರು.

ಪಾಣೆಮಂಗಳೂರು ಪೇಟೆಯಲ್ಲಿ ಶೌಚಾಲಯ ನಿರ್ಮಿಸಲೆಂದು ಲಿಖಿತಮನವಿ ಮಾಡಿದ್ದರೂ ಇನ್ನೂ ನಿರ್ಮಿಸಲಾಗಲಿಲ್ಲ ಸದಸ್ಯೆ ಚಂಚಲಾಕ್ಷಿ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ವಸಂತಿ ಚಂದಪ್ಪ, ಜಗದೀಶ್ ಕುಂದರ್, ಸುಗುಣಾ ಕಿಣಿ, ಭಾಸ್ಕರ ಟೈಲರ್, ಯಸ್ಮೀನ್, ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಮುನೀಶ್ ಅಲಿ, ನಾಮನಿರ್ದೇಶಿತ ಸದಸ್ಯ ಅಬೂಬಕರ್ ಸಿದ್ದೀಕ್ ಗುಡ್ಡೆ ಅಂಗಡಿ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News