ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ

Update: 2017-06-29 17:33 GMT

ಮಂಗಳೂರು, ಜೂ. 29: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಳ್ಳಾಲದಲ್ಲಿ ಕಡಲ ಆರ್ಭಟ ತೀವ್ರಗೊಂಡಿದೆ. ಕಡಲ್ಕೊರೆತದಿಂದಾಗಿ ಕೆಲವು ಮನೆಗಳು ಹಾನಿಗೀಡಾಗಿದ್ದು, ಇನ್ನೂ ಹಲವು ಮನೆಗಳು ಸಮುದ್ರ ಪಾಲಾಗುವ ಅಪಾಯವನ್ನು ಎದುರಿಸುತ್ತಿವೆ.

ಉಳ್ಳಾಲ ವ್ಯಾಪ್ತಿಯ ಕೈಕೋ, ಕಿಲರಿಯನಗರ, ಸುಭಾಶ್‌ನಗರ, ಇಂದಿರಾನಗರ ಸಹಿತ ಇತರ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಕಡಲ್ಕೊರೆತ ತೀವ್ರಗೊಂಡಿದೆ. ಕಡಲ ಅಲೆಗಳ ಅಬ್ಬರಕ್ಕೆ ಬುಧವಾರ ಕಿಲರಿಯನಗರದ ನಿವಾಸಿಗಳಾದ ಹಮೀದ್ ಹಮ್ಮಬ್ಬ ಮತ್ತು ಬೀಫಾತುಮ್ಮ ಎಂಬವರ ಮನೆಗಳು ನಾಶಗೊಂಡಿವೆ. ಇನ್ನು ಕೆಲವು ಮನೆಗಳು ಭಾಗಶಃ ಹಾನಿಗೀಡಾಗಿವೆ. ಸಮುದ್ರ ತೀರ ಪ್ರದೇಶದಲ್ಲಿ ವಾಸಿಸುತ್ತಿರುವ ಹಲವು ಕುಟುಂಬಗಳು ತಮ್ಮ ಮನೆಗಳು ಸಮುದ್ರ ಪಾಲಾಗುವ ಭೀತಿಯನ್ನು ಎದುರಿಸುತ್ತಿವೆ.

ಕಡಲ್ಕೊರೆತ ಪ್ರದೇಶಕ್ಕೆ ಎಸಿ ದಿಢೀರ್ ಭೇಟಿ

ಎರಡು ದಿನಗಳಿಂದ ಉಳ್ಳಾಲ ಸಮುದ್ರ ಕಿನಾರೆಯಲ್ಲಿ ಕಡಲ್ಕೊರೆತ ತೀವ್ರಗೊಂಡ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರಾದ ರೇಣುಕಾ ಪ್ರಸಾದ್ ಅವರು ಬುಧವಾರ ಸಂಜೆ ಕಿಲರಿಯ ನಗರಕ್ಕೆ ಭೇಟಿ ನೀಡಿ ಕಡಲ್ಕೊರೆತವನ್ನು ವೀಕ್ಷಿಸಿದರು.

ಎ.ಸಿ.ಯವರ ಭೇಟಿಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ನಾಗರಿಕರು ಕಿಲರಿಯ ನಗರಕ್ಕೆ ಆಗಮಿಸಿ ಎ.ಸಿ.ಯೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕೆಲವು ಮಹಿಳೆಯರು ಸಹಾಯಕ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ವಸತಿ ವ್ಯವಸ್ಥೆ ಕಲ್ಪಿಸಲು ಒತ್ತಾಯ

‘‘ಕಳೆದ ಹಲವು ವರ್ಷಗಳಿಂದ ಕಡಲ ತೀರದಲ್ಲಿ ವಾಸಿಸುತ್ತಿರುವ ನಾವು ಪ್ರತಿ ವರ್ಷವೂ ಕಡಲ್ಕೊರೆತದ ಭೀತಿಯನ್ನು ಎದುರಿಸುತ್ತಿದ್ದೇವೆ. ಕೂಲಿ ಕಾರ್ಮಿಕರು, ಮೀನುಗಾರರು ಹಾಗೂ ಆರ್ಥಿಕವಾಗಿ ಹಿಂದುಳಿದವರೇ ಅಧಿಕವಾಗಿರುವ ನಮಗೆ ಪರ್ಯಾಯವಾಗಿ ವಸತಿ ವ್ಯವಸ್ಥೆಯನ್ನು ಒದಗಿಸಬೇಕು. ಇಲ್ಲದಿದ್ದರೆ ತಾತ್ಕಾಲಿಕವಾದರೂ ಬೇರೆಡೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿ’’ ಎಂದು ಕೆಲವರು ಸಹಾಯಕ ಆಯುಕ್ತರ ಮುಂದೆ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಕೆಲವು ಮಹಿಳೆಯರೂ ಕೂಡ ‘‘ಕಿಲರಿಯ ನಗರ ಸುತ್ತಮುತ್ತ ಸರಕಾರಿ ಜಾಗವನ್ನಾದರೂ ಕೊಡಿ, ನಾವು ಅಲ್ಲಿ ಗುಡಿಸಲನ್ನಾದರೂ ಕಟ್ಟಿ ಬದುಕುತ್ತೇವೆ. ಈ ಕಡಲ್ಕೊರೆತದಿಂದಾಗಿ ಪ್ರತಿ ವರ್ಷ ನಾವು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ’’ ಎಂದು ಆಯುಕ್ತರಲ್ಲಿ ಅವಲತ್ತುಕೊಂಡರು. ಸ್ಥಳೀಯರಾದ ಸಲಾಂ ಕಡಪ್ಪರ, ಖಲೀಲ್, ಬಶೀರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಗರ ಸಭೆಯಲ್ಲೂ ಪ್ರತಿಧ್ವನಿಸಿದ ಕಡಲ್ಕೊರೆತ

ಗುರುವಾರ ನಡೆದ ಉಳ್ಳಾಲ ನಗರಸಭಾ ಸಾಮಾನ್ಯ ಸಭೆಯಲ್ಲೂ ಉಳ್ಳಾಲದ ಕಡಲ್ಕೊರೆತವು ಪ್ರತಿಧ್ವನಿಸಿತು. ನಗರಸಭಾ ಸದಸ್ಯ ಮುಹಮ್ಮದ್ ಮುಕ್ಕಚ್ಚೇರಿ ಅವರು ವಿಷಯವನ್ನು ಪ್ರಸ್ತಾಪಿಸಿ ಉಳ್ಳಾಲ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದರು. ಕಡಲ್ಕೊರೆತ ತಡೆಯಲು ಸಮುದ್ರದಲ್ಲಿ ಹಾಕುತ್ತಿರುವ ಬರ್ಮ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಕಡಲ ತೀರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಶಾಶ್ವತವಾಗಿ ಬೇರೆಡೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಸ್ಥಳೀಯ ನಿವಾಸಿಗಳ ಹಲವು ವರ್ಷಗಳ ನೋವಿಗೆ ನಗರಸಭೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಇತರ ಕೆಲವು ಸದಸ್ಯರೂ ಧ್ವನಿಗೂಡಿಸಿದರು. ಸದಸ್ಯರ ಒತ್ತಾಯಕ್ಕೆ ಸಹಮತ ವ್ಯಕ್ತಪಡಿಸಿದ ನಗರಸಭಾ ಅಧ್ಯಕ್ಷರು ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಂಗನವಾಡಿಗಳಿಗೂ ಕಾದಿರುವ ಅಪಾಯ

ಕಿಲರಿಯನಗರ ಮತ್ತು ಕೈಕೊ ಪ್ರದೇಶಗಳಲ್ಲಿ ಎರಡು ಮಸೀದಿಗಳಿದ್ದು, ಈ ಮಸೀದಿಗಳ ಸಮೀಪವೇ ಎರಡು ಅಂಗನವಾಡಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಪುಟ್ಟ ಮಕ್ಕಳು ಕಲಿಯುತ್ತಿದ್ದಾರೆ. ಇದೀಗ ಈ ಅಂಗನವಾಡಿಗಳೂ ಸಮುದ್ರ ಪಾಲಾಗುವ ಭೀತಿಯನ್ನು ಎದರಿಸುತ್ತಿವೆ. ಆದ್ದರಿಂದ ಪುಟ್ಟ ಮಕ್ಕಳ ರಕ್ಷಣೆಯ ಹಿತದೃಷ್ಟಿಯಿಂದ ಈ ಅಂಗನವಾಡಿ ಕೇಂದ್ರಗಳನ್ನು ಕೂಡಲೇ ಸ್ಥಳಾಂತರಗೊಳಿಸಬೇಕು. ಈಗಾಗಲೇ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕೇಂದ್ರಗಳು ಸರಕಾರಿ ಜಾಗದಲ್ಲಿ ವ್ಯವಸ್ಥೆಯಲ್ಲಿ ಕಲ್ಪಿಸಬೇಕು ಎಂದು ಮುಹಮ್ಮದ್ ಮುಕ್ಕಚ್ಚೇರಿ ಸಭೆಯಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News