ಪುತ್ತೂರಿನಲ್ಲಿ ‘ಇ-ಫ್ರೆಂಡ್ಸ್' ವತಿಯಿಂದ ಯೋಧರಿಗೆ ಸನ್ಮಾನ
ಪುತ್ತೂರು, ಜೂ.30: ದೇಶದ ಸೈನ್ಯವು ಧರ್ಮ, ಜಾತಿ ಹಾಗೂ ವರ್ಣರಹಿತವಾಗಿದೆ. ದೇಶಸೇವೆ ಮಾಡುವ ಪ್ರತಿಯೊಬ್ಬ ಭಾರತೀಯನಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ, ದೈಹಿಕ ಸಾಮರ್ಥ್ಯದಲ್ಲಿ ಅತ್ಯುತ್ತಮ ನಿರ್ವಹಣೆ ಹಾಗೂ ದೇಶ ಮೊದಲು ಎಂಬ ಪ್ರತಿಜ್ಞೆ ಸೈನ್ಯಕ್ಕೆ ಸೇರಲು ಮುಖ್ಯವಾಗಿರುತ್ತದೆ ಎಂದು ಕ್ಯಾಪ್ಟನ್ ರಾಧೇಶ್ ಹೇಳಿದರು.
‘ಇ’-ಫ್ರೆಂಡ್ಸ್ ಪುತ್ತೂರು ಆಯೋಜಿಸಿದ್ದ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ದೇಶದ ಆಸ್ತಿಯಾಗಿದ್ದಾರೆ, ‘ಇ’-ಫ್ರೆಂಡ್ಸ್ ನಡೆಸುತ್ತಿರುವ ಜನಕಲ್ಯಾಣ ಸೇವೆ ಮತ್ತು ಶಿಕ್ಷಣ ಸೇವೆ ಕೂಡ ದೇಶಪ್ರೇಮದ ಭಾಗವಾಗಿದೆ ಎಂದರು.
ಸಮಾರಂಭದಲ್ಲಿ 18 ಗ್ರೆನೇಡಿಯರ್ಸ್ ಸೇನಾಧಿಕಾರಿ ಕ್ಯಾಪ್ಟನ್ ರಾಧೇಶ್, ಭಾರತೀಯ ಕೇಂದ್ರೀಯ ಪೋಲೀಸ್ ತುಕಡಿಯ ವಿಜಯಕುಮಾರ್ ನೆಲಪ್ಪಾಲು, ನಿವೃತ್ತ ಸೈನಿಕರಾದ ಪಾಸೀಲು ಮುಹಮ್ಮದ್ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭ ತನ್ನ ಇಬ್ಬರು ಪುತ್ರರನ್ನು ಸೈನ್ಯಕ್ಕೆ ಸೇರಿಸಿರುವ ರಾಧಾಕೃಷ್ಣ ಗೌಡರನ್ನೂ ಸನ್ಮಾನಿಸಲಾಯಿತು.
ಡಾ.ಸರ್ಫರಾಝ್, ಹೈದರ್ ಚೋಯ್ಸ್, ನೌಶದ್ ಕೂರ್ನಡ್ಕ, ರಫೀಕ್ ರಾಯಲ್ ಸನ್ಮಾನವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ "ಇ-ಫ್ರೆಂಡ್ಸ್" ನ ಅಧ್ಯಕ್ಷ ಪಾರ್ಲೆ ಸಂಸ್ಥೆಯ ಇಮ್ತಿಯಾಝ್, ಉಪಾಧ್ಯಕ್ಷ ಆಶಿಫ್ ಬಪ್ಪಳಿಗೆ ಮತ್ತು ಸದಸ್ಯರು ಉಪಸ್ಥಿತರಿದ್ದರು.