×
Ad

ಹತ್ಯೆಗೊಳಗಾದ ಅಶ್ರಫ್ ಕುಟುಂಬಕ್ಕೆ ಜೆ.ಡಿ.ಎಸ್‌ನಿಂದ ಧನ ಸಹಾಯ

Update: 2017-06-30 19:46 IST

ಪುತ್ತೂರು,ಜೂ.30 : ಬಂಟ್ವಾಳ ತಾಲೂಕಿನ ಕಳಾಯಿ ಎಂಬಲ್ಲಿ ಅಕ್ರಮಿಗಳಿಂದ ಹತ್ಯೆಗೈಯ್ಯಲ್ಪಟ್ಟ ಅಶ್ರಫ್‌ನ ಮನೆಗೆ ರಾಜ್ಯ ಜೆ.ಡಿ.ಎಸ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಹಾಗೂ ಇತರ ಮುಖಂಡರು ಭೇಟಿ ನೀಡಿ ಅಶ್ರಫ್‌ರ ತಾಯಿಯವರಲ್ಲಿ ರೂ. 1ಲಕ್ಷವನ್ನು ಸಹಾಯಧನವಾಗಿ ನೀಡಿದರು. ಮುಂದಕ್ಕೆ ತಮ್ಮ ಕುಟುಂಬದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

  ಮೃತ ಅಶ್ರಫ್ ಊರಿನ ಬಡ ಜನತೆಯ ಆಧಾರ ಸ್ತಂಭವಾಗಿದ್ದಲ್ಲದೆ, ರಾತ್ರಿ ಹಗಲೆನ್ನದೆ ಬಡವರ ಧ್ವನಿಗೆ ಸ್ಪಂದಿಸುತ್ತಿದ್ದರು. ಬಡವರ ಪಾಲಿಗೆ ಬಂಧುವಾಗಿಯೇ ಇದ್ದ ಅಶ್ರಫ್, ವಾಸಿಸಲು ಸ್ವಂತ ಮನೆ ಇರದಿದ್ದರೂ, ಬಡವರ ಸೇವೆಯೇ ಪರಮ ಗುರಿಯಾಗಿ ಕಂಡಿದ್ದರು. ಆರ್ಥಿಕವಾಗಿ ಬಡತನವಿದ್ದರೂ ಹೃದಯ ಮಾತ್ರ ವಿಶಾಲ ಅರಮನೆಯಾಗಿತ್ತು ಎಂದ ಫಾರೂಕ್ ಅವರು ಇಂತಹ ಮುಗ್ಧನನ್ನು ಯಾವುದೇ ಕಾರಣವಿಲ್ಲದೆ ದುಷ್ಕರ್ಮಿಗಳು ಹತ್ಯೆಗೈದಿರುವುದು ನಿಜಕ್ಕೂ ಖಂಡನೀಯ ಎಂದರು. ದುಷ್ಕರ್ಮಿಗಳಿಗೆ ಯಾವುದೇ ರೀತಿಯ ಸದ್ಗುಣಗಳೋ ಪರೋಪಕಾರವೋ ಲೆಕ್ಕಕ್ಕೆ ಬರುತ್ತಿಲ್ಲ. ಮುಸ್ಲಿಮನೆಂಬ ಮಾತ್ರಕ್ಕೆ ಯಾವುದೇ ಸದ್ಗುಣಗಳನ್ನು ಲೆಕ್ಕಿಸದೆ ಕೊಂದಿರುವುದು ತಮ್ಮ ನೀಚ ದುರ್ನಡತೆಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಕುಂಞಿ, ಇಬ್ರಾಹಿಂ ಗೋಳಿಕಟ್ಟೆ, ಅಶ್ರಫ್ ಕಲ್ಲೇಗ, ಸ್ಥಳೀಯ ನಾಯಕ ಅಬೂಬಕ್ಕರ್ ಅಮ್ಮುಂಜೆ, ಮಹಾನಗರ ಪಾಲಿಕೆ ಸದಸ್ಯೆ ರಮೀಝ ನಾಸಿರ್, ಸುದರ್ಶನ್ ಶೆಟ್ಟಿ, ಅಕೀಂ, ನಾಸಿರ್, ಶ್ರೀನಾಥ್ ರೈ, ಮೊಹಮ್ಮದ್, ಹೈದರ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News