ಡೋಕ್ಲಮ್ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಚೀನಾದ ಪ್ರಯತ್ನ: ಭಾರತ

Update: 2017-06-30 14:55 GMT

 ಹೊಸದಿಲ್ಲಿ, ಜೂ.30: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಸಿಕ್ಕಿಂನ ಡೋಕ್ಲಮ್ ಪ್ರದೇಶದೊಳಗೆ ಪ್ರವೇಶಿಸಿರುವುದು ‘ಯಥಾಸ್ಥಿತಿ’ಯಲ್ಲಿ ಗಮನಾರ್ಹ ಬದಲಾವಣೆ ಆಗಿರುವುದರ ಸೂಚಕವಾಗಿದ್ದು ಇದು 2012ರ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಭಾರತವು ಚೀನಾಕ್ಕೆ ತಿಳಿಸಿದೆ.

     ಜೂನ್ 16ರಂದು ಪಿಎಲ್‌ಎಯ ನಿರ್ಮಾಣ ಕಾರ್ಯದ ತಂಡವೊಂದು ಡೋಕ್ಲಾ ಪ್ರದೇಶದ ಒಳಗೆ ಬಂದು ಅಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಿತು. ಆಗ ರಾಯಲ್ ಭೂತಾನ್ ಸೇನೆಯು ಇದಕ್ಕೆ ತಡೆಯೊಡ್ಡಲು ಯತ್ನಿಸಿದೆ ಎಂದು ಮಾಹಿತಿ ಬಂದಿದೆ. ಬಳಿಕ ‘ಯಥಾಸ್ಥಿತಿ’ಯನ್ನು ಬದಲಿಸುವ ಪ್ರಯತ್ನ ಕೈಬಿಡುವಂತೆ ಭಾರತದ ಸೇನೆ ಮತ್ತು ರಾಯಲ್ ಭೂತಾನ್ ಸೇನೆ ಪಿಎಲ್‌ಎ ಸೈನಿಕರನ್ನು ಆಗ್ರಹಿಸಿದವು ಎಂದು ಭಾರತದ ವಿದೇಶ ವ್ಯವಹಾರ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಿಕ್ಕಿಂ ಭಾಗದಲ್ಲಿ ಭಾರತದ ಸೇನೆ ಗಡಿ ಉಲ್ಲಂಘಿಸಿದೆ ಎಂಬ ಚೀನಾದ ಹೇಳಿಕೆಯನ್ನು ಖಂಡಿಸಿದೆ.

    ಚೀನಾದ ಇತ್ತೀಚಿನ ಉಪಕ್ರಮಗಳ ಬಗ್ಗೆ ಭಾರತ ತೀವ್ರ ಆತಂಕಗೊಂಡಿದೆ. ಅಲ್ಲದೆ ಈ ರೀತಿಯ ರಸ್ತೆ ನಿರ್ಮಾಣ ಕಾರ್ಯ ‘ಯಥಾಸ್ಥಿತಿ’ಯಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ದೇಶದ ಭದ್ರತೆಯ ವಿಷಯದಲ್ಲಿ ಗಂಭೀರ ಸೂಚನೆಯಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ನಿರ್ಮಾಣ ಕಾರ್ಯವನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಭೂತಾನ್ ಸರಕಾರ ಚೀನಾಕ್ಕೆ ಮನವಿ ಸಲ್ಲಿಸಿದ ಬಳಿಕ ಭಾರತದ ಕಟುವಾದ ಹೇಳಿಕೆ ಹೊರಬಿದ್ದಿದೆ.

      ತ್ರಿರಾಷ್ಟ್ರಗಳ ಸಂಗಮ ಸ್ಥಳದ ಗಡಿ ಗುರುತನ್ನು ಚೀನ, ಭಾರತ, ಭೂತಾನ್ ಮಾತುಕತೆ ನಡೆಸಿ ನಿರ್ಧರಿಸಬೇಕು ಎಂಬ ಕರಾರಿಗೆ 2012ರಲ್ಲಿ ಚೀನಾವು ಒಪ್ಪಿಗೆ ಸೂಚಿಸಿತ್ತು . ಇದೀಗ ಸಂಗಮಸ್ಥಳದ ಬಗ್ಗೆ ಏಕಪಕ್ಷೀಯವಾಗಿ ನಿರ್ಧರಿಸುವುದು ಈ ಕರಾರಿನ ಉಲ್ಲಂಘನೆಯಾಗಿದೆ ಎಂದು ಭಾರತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News