ಅರ್ಜಿಯನ್ನೇ ಸಲ್ಲಿಸದ ವ್ಯಕ್ತಿಗೆ ಬಂತು ಆಧಾರ್ ಕಾರ್ಡ್!

Update: 2017-06-30 16:00 GMT

ಹೊಸದಿಲ್ಲಿ.ಜೂ.30: ದೇಶದ ಕೋಟ್ಯಂತರ ಜನರ ಅಮೂಲ್ಯ ಮಾಹಿತಿಗಳನ್ನು ಹೊಂದಿರುವ ಆಧಾರ್ ವ್ಯವಸ್ಥೆಯಲ್ಲಿ ಹೀಗೂ ಆಗುತ್ತದೆ. ನಾಗರಿಕ ಹಕ್ಕುಗಳ ಕಾರ್ಯಕರ್ತರಾಗಿರುವ ನಾಗರಿಕ ಹಕ್ಕುಗಳಿಗಾಗಿ ಪ್ರಜಾ ವೇದಿಕೆಯ ಸದಸ್ಯ ಗೋಪಾಲಕೃಷ್ಣ ಎನ್ನುವವರಿಗೆ ‘‘ನಿಮ್ಮ ಬಯೊಮೆಟ್ರಿಕ್ ದಾಖಲೆಗಳನ್ನು ಪಡೆದುಕೊಂಡಿದ್ದು, ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಲಾಗಿದೆ ’’ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ತಿಳಿಸಿದೆ. ಚೋದ್ಯವೆಂದರೆ ಸರಕಾರವು ಎಲ್ಲ ಸೇವೆಗಳಿಗೂ ಆಧಾರ್‌ನ್ನು ಕಡ್ಡಾಯಗೊಳಿಸುತ್ತಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಗೋಪಾಲಕೃಷ್ಣ ಆಧಾರ್ ಕಾರ್ಡ್‌ಗಾಗಿ ಈವರೆಗೆ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ!

ಆಧಾರ್ ಕಾರ್ಡ್‌ಗಾಗಿ ಬಯೊಮೆಟ್ರಿಕ್ ಮತ್ತು ಇತರ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ದೃಢೀಕರಿಸಿ ಈ ತಿಂಗಳು ಯುಐಡಿಎಐನಿಂದ ಹಲವಾರು ಇ-ಮೇಲ್‌ಗಳು ಗೋಪಾಲಕೃಷ್ಣರಿಗೆ ಬಂದಿವೆ.

ಪಿ.ಕೃಷ್ಣ ಎಂಬ ಹೆಸರಿಗೆ ಬಂದಿದ್ದ ಮೊದಲ ದೃಢೀಕರಣ ಇ-ಮೇಲ್ ಸ್ವೀಕರಿಸಿದ ಬಳಿಕ ಗೋಪಾಲಕೃಷ್ಣ ಅವರು ಈ ತಪ್ಪನ್ನು ಟ್ವಿಟರ್ ಮೂಲಕ ಯುಐಡಿಎಐ ಗಮನಕ್ಕೆ ತಂದಿದ್ದರು. ಆ ನಂತರವೂ ಅವರಿಗೆ ಅಂತಹುದೇ ಇನ್ನೆರಡು ಮೇಲ್‌ಗಳು ಬಂದಿವೆ.

‘‘ನಾನು ನನ್ನ ಬಯೊಮೆಟ್ರಿಕ್ ವಿವರಗಳನ್ನು, ಕಣ್ಣಪಾಪೆಯ ಅಚ್ಚನ್ನು ನೀಡಿಯೇ ಇಲ್ಲ. ಅದಕ್ಕೂ ಮಿಗಿಲಾಗಿ ಆಧಾರ್‌ಗಾಗಿ ನಾನು ಅರ್ಜಿಯನ್ನೂ ಸಲ್ಲಿಸಿಲ್ಲ. ಹೀಗಿರುವಾಗ ನನ್ನ ಆಧಾರ್ ದೃಢೀಕರಣ ಆಗಿದ್ದಾದರೂ ಹೇಗೆ ’’ ಎಂದು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ.

ವ್ಯವಸ್ಥೆಯಲ್ಲಿನ ದೋಷ ಇದಕ್ಕೆ ಕಾರಣವೆನ್ನುವುದನ್ನು ಯುಐಡಿಎಐ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಅರ್ಜಿದಾರರು ನೀಡಿರುವ ಇ-ಮೇಲ್ ವಿಳಾಸಗಳೊಂದಿಗೇ ತಾವು ವ್ಯವಹರಿಸುತ್ತೇವೆ ಎಂದಿರುವ ಅವರು, ಖಾಸಗಿಯವರು ನಡೆಸುತ್ತಿರುವ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಇ-ಮೇಲ್ ಐಡಿಯ ಗೊಂದಲ ಉಂಟಾಗಿರುವ ಸಾಧ್ಯತೆ ಯಿದೆ ಎಂದಿದ್ದಾರೆ.

ಸಂಬಂಧಿಸಿದ ಸಿಬ್ಬಂದಿಯ ಕಣ್ತಪ್ಪು ಇದಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಯಾದರೂ, ಕೋಟ್ಯಂತರ ಜನರ ಬಯೊಮೆಟ್ರಿಕ್ಸ್ ಮತ್ತು ಇತರ ದಾಖಲೆಗಳನ್ನು ನಿರ್ವಹಿಸುವಲ್ಲಿ ಅಗತ್ಯ ತಾಂತ್ರಿಕ ಬೆಂಬಲವನ್ನು ಯುಐಡಿಎಐ ಹೊಂದಿಲ್ಲ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಗೋಪಾಲಕೃಷ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News