×
Ad

ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗಾಗಿ 4 ಕೌಶಲ್ಯ ಅಭಿವೃದ್ಧಿ ಕೇಂದ್ರ : ಐವನ್ ಡಿ ಸೋಜ

Update: 2017-06-30 20:52 IST

ಮಂಗಳೂರು,ಜೂ.30:ರಾಜ್ಯದ ನಾಲ್ಕು ಉಪ ವಿಭಾಗ ವ್ಯಾಪ್ತಿಯಲ್ಲಿ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ ನೇತೃತ್ವದಲ್ಲಿ ಅಲ್ಪ ಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ಐಎಎಸ್,ಐಪಿಎಸ್ ಅಲ್ಲದೆ ಇತರ ಸ್ಪರ್ಧಾತ್ಮಕ ಹಾಗೂ ಶೈಕ್ಷಣಿಕ ಪರೀಕ್ಷೆಗಳಿಗೂ ತರಬೇತಿ ನೀಡುವ ಸೌಲಭ್ಯ ಕಲ್ಪಿಸಲಾಗುವುದು.ಇತರ ಕೌಶಲ್ಯ ಅಭಿವೃದ್ಧಿಗೂ ತರಬೇತಿ ಅವಕಾಶ ಕಲ್ಪಿಸಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

 ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ನಿಗಮವಾಗಿ ಪರಿವರ್ತಿಸಲು ಚಿಂತನೆ:-ಹಾಲಿ ಇರುವ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ ಅಥವಾ ಮಂಡಳಿಯಾಗಿ ಪರಿವರ್ತಿಸುವ ಅಗತ್ಯವಿದೆ.ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಯ ಜೊತೆ ಸಮಾಲೋಚಿಸಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

 ಈ ಬಾರಿ ಕ್ರೈ  ಸ್ತ ಅಭಿವೃದ್ಧಿ ಪರಿಷತ್ ವತಿಯಿಂದ ಟ್ಯಾಕ್ಸಿ ,ಗೂಡ್ಸ್ ವಾಹನ ಖರೀದಿ ಯೋಜನೆ ಸಹಾಯ ಧನದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಈ ಯೋಜನೆಯ ಪ್ರಕಾರ ರೂ. 4ಲಕ್ಷದಿಂದ 7.50ಲಕ್ಷದವರೆಗೆ ಖರೀದಿಸುವ ವಾಹನಗಳಿಗೆ ಸಂಬಂಧಿಸಿದಂತೆ ಶೇ 50ಷ್ಟು ಸಹಾಯಧನ ನೀಡಲಾಗುವುದು.

  ಪಶು ಸಂಗೋಪನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕ್ರೈಸ್ತ ಸಮುದಾಯವರು ನಿರಂತರ ಆದಾಯ ಹೊಂದುವ ಸಲುವಾಗಿ ವಿಶೇಷವಾಗಿ ಮಹಿಳೆಯರಿಗಾಗಿ ಶೇ 50ರ ಸಹಾಯ ಧನದಲ್ಲಿ ಹೈನುಗಾರಿಕೆ,ಕೋಳಿ ಸಾಕಾಣೆ,ಕುರಿ ಸಾಕಾಣೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆ ನಡೆಸುವ ಸೌಲಭ್ಯ ಕಲ್ಪಿಸಲಾಗಿದೆ.ಗಂಗಾ ಕಲ್ಯಾಣ ಯೋಜನೆಯಲ್ಲಿ ಎಕರೆ ಜಮೀನು ಹೊಂದಿರುವವರಿಗೂ 2ಲಕ್ಷ ಘಟಕ ವೆಚ್ಚದಲ್ಲಿ ಕೊಳವೆ ಬಾವಿ ತೆರೆದು ನೀರಾವರಿಗೆ ಸೌಲಭ್ಯ ಕಲ್ಪಿಸುವ ವಿದ್ಯುತ್ ವ್ಯವಸ್ಥೆ ಜೋಡಣೆಯನ್ನು ವೈಯಕ್ತಿಕ ನೀರಾವರಿ ಯೋಜನೆಯಡಿ ಉಚಿತವಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗುವುದು ಈ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

  ರಾಜ್ಯದಲ್ಲಿ ಮುಂದಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು.ದೇಶದ ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರ ವಿವಿಧ ಯೋಜನೆಗಳಿಗಾಗಿ ಒಟ್ಟು 28 ಸಾವಿರ ಕೋಟಿ ನೀಡಿದ್ದರೆ.ಕರ್ನಾಟಕದ ಹಿಂದಿನ ಬಜೆಟ್‌ನಲ್ಲಿ 3,750 ಕೋಟಿ ರೂ ನಿಗದಿ ಪಡಿಸಲಾಗಿದೆ.ಇದು ರಾಜ್ಯದ ಇತಿಹಾಸದಲ್ಲಿಯೇ ಅಲ್ಪ ಸಂಖ್ಯಾತರಿಗೆ ಮೀಸಲಿಟ್ಟ ಗರಿಷ್ಟ ಪ್ರಮಾಣದ ಅನುದಾನವಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

 ಅಲ್ಪ ಸಂಖ್ಯಾತರಿಗೆ ಅರಿವು ಯೋಜನೆಯ ಮೂಲಕ ಸಾಲ ಸೌಲಭ್ಯ,ಕಿರು ಸಾಲ ಯೋಜನೆ,ಪ್ರವಾಸಿ ಸ್ವಯಂ ಉದ್ಯೋಗ ಯೋಜನೆ ವಿದ್ಯಾರ್ಥಿ ನಿಲಯ ಸೌಲಭ್ಯ ಸಿಇಟಿ ಪೂರ್ವ ತಯಾರಿಗೆ ,ಪಿಎಚ್‌ಡಿ ಮತ್ತು ಎಂಫಿಲ್ ವ್ಯಾಸಂಗ ಮಾಡುವವರಿಗೆ ಫೆಲೋಶಿಫ್ ಅಲ್ಪ ಸಂ ಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯ ಮೂಲಕ ನೀಡಲಾಗುತ್ತದೆ ಈ ಬಗ್ಗೆ ಮುಂದಿನ ಎರಡೂವರೆ ತಿಂಗಳಲ್ಲಿ ರಾಜ್ಯಾದ್ಯಂತ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಚರ್ಚ್‌ನ ಧರ್ಮ ಗುರುಗಳಾದ ವಂ.ಮಾಥ್ಯೂವಾಝ್, ವಂ.ಐಸಕ್ ಪಾಲನ್,ಮನಪಾ ಸದಸ್ಯರಾದ ನವೀನ್ ಡಿ ಸೋಜ,ಸ್ಪೀಪನ್ ಮರೋಳಿ,ಮಾಜಿ ಮೇಯರ್ ಅಶ್ರಫ್ ಹಾಗೂ ಮಾರ್ಸೆಲ್ ಮೊಂತೆರೋ,ಅನಿಲ್ ಲೋಬೊ ,ನಾಗೇಂದ್ರ ,ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News