ಜಿಎಸ್‌ಟಿಯಿಂದ ‘ಇನ್‌ಸ್ಪೆಕ್ಟರ್ ರಾಜ್’ ಅಂತ್ಯ: ಗಡ್ಕರಿ

Update: 2017-06-30 15:22 GMT

ಹೊಸದಿಲ್ಲಿ, ಜೂ.30: ಬಹುನಿರೀಕ್ಷಿತ ಜಿಎಸ್‌ಟಿ ಅನುಷ್ಠಾನದಿಂದ ‘ಇನ್‌ಸ್ಪೆಕ್ಟರ್ ರಾಜ್’(ಅತಿಯಾದ ನಿಬಂಧನೆ, ನಿಯಂತ್ರಣ) ಅಂತ್ಯವಾಗಲಿದ್ದು, ಕಪ್ಪು ಹಣ ಹೊರಬರುವುದರೊಂದಿಗೆ ಭ್ರಷ್ಟಾಚಾರ ಕೊನೆಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಜಿಎಸ್‌ಟಿಯು ಕಪ್ಪು ಹಣವನ್ನು ಹೊರಗೆಳೆಯುವ ಮೂಲಕ ದೇಶದ ಅರ್ಥವ್ಯವಸ್ಥೆಗೆ ಭಾರೀ ನೆರವು ನೀಡಲಿದೆ . ರಾಜ್ಯ ಮತ್ತು ಕೇಂದ್ರ ಸರಕಾರದ ಆದಾಯ ಹೆಚ್ಚಲಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನೂ ಇದರಡಿ ಸೇರಿಸಿದ ಬಳಿಕ ರಾಜ್ಯಗಳಿಗೆ ಭರ್ಜರಿ ಲಾಭವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಹೇಳಿದರು.

ಜಿಎಸ್‌ಟಿ ಜಾರಿಗೆ ಬಂದ ಬಳಿಕ 17 ತೆರಿಗೆ ಮತ್ತು 22 ಇತರ ಉಪತೆರಿಗೆಗಳು ರದ್ದಾಗಲಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಜಿಎಸ್‌ಟಿಯನ್ನು ಶ್ಲಾಘಿಸಿದ್ದಾರೆ . ತರಾತುರಿಯಲ್ಲಿ ಜಿಎಸ್‌ಟಿ ಜಾರಿಗೊಳಿಸಲಾಗುತ್ತಿದೆ ಎಂಬುದು ಸಂಪೂಣರ್  ಸುಳ್ಳು. ಹಲವು ಸಮಯದ ಹಿಂದೆಯೇ ಈ ಪ್ರಕ್ರಿಯೆ ಆರಂಭವಾಗಿತ್ತು. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಕೂಡಾ ಈ ಪ್ರಕ್ರಿಯೆಯ ಭಾಗವಾಗಿತ್ತು ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಪ್ಯಾಕ್ ಮಾಡಲಾಗಿರುವ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಅನ್ವಯಿಸುವುದರಿಂದ ಬಡ ಮಧ್ಯಮವರ್ಗದ ಜನತೆಗೆ ಯಾವುದೇ ಪರಿಣಾಮವಾಗದು ಎಂದ ಅವರು, ಜನರ ಒಳಿತಿಗಾಗಿ ನಾವು ಯೋಜನೆ ರೂಪಿಸಿದ್ದೇವೆ. ಈ ನಿಟ್ಟಿನಲ್ಲಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆರಂಭದಲ್ಲಿ ಸಣ್ಣಪುಟ್ಟ ತೊಂದರೆ ಇರಬಹುದು. ಅವನ್ನು ಬಗೆಹರಿಸಲಾಗುವುದು ಎಂದು ಹೇಳಿದರು.

ಜನತೆಗೆ ತೊಂದರೆ ಆಗುವುದೇ ಇಲ್ಲ ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಮತ್ತು ಅಂತಿಮವಾಗಿ ಇದರಿಂದ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News