ಚೆಸ್: ಅಮೇರಿಕಾದಲ್ಲಿ ದೇಶದ ಕೀರ್ತಿಪತಾಕೆ ಹಾರಿಸಿದ ಕುಂದಾಪುರದ ಸಮರ್ಥ್
ಉಡುಪಿ, ಜೂ.30: ಅಮೇರಿಕಾದ ಫ್ಲೋರಿಡಾದಲ್ಲಿ ಈ ತಿಂಗಳ 22ರಿಂದ 28ರವರೆಗೆ ನಡೆದ ಪ್ರಥಮ ವಿಶ್ವ ಫಿಡೇ ಕಿರಿಯ ವಿಕಲಾಂಗರ ಚೆಸ್ ಸ್ಪರ್ಧೆ ಯಲ್ಲಿ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿರುವ ಕುಂದಾಪುರ ಬಸ್ರೂರಿನ ಬಾಲಕ ಸಮರ್ಥ್ ಜಗದೀಶ್ ರಾವ್ ದೇಶಕ್ಕೆ ಕೀರ್ತಿತಂದಿದ್ದಾರೆ.
ಸಮರ್ಥ್ ಅವರು ಆಡಿದ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದುಕೊಂಡು ವಿಶ್ವಕಿರೀಟವನ್ನು ಮುಡಿಗೇರಿಸಿಕೊಂಡರು. ಪೋರ್ಟೋರಿಕ, ಬೆಲ್ಜಿಯಂ, ಪೆರುಗ್ವೆ, ಉಗಾಂಡ, ಅಮೇರಿಕಾ ಮೊದಲಾದ ದೇಶಗಳ ಆಟಗಾರರ ವಿರುದ್ಧ ಸಮರ್ಥ್ ಜಯ ಸಾಧಿಸಿದರೆ, ಜರ್ಮನಿಯ ಝಿಮ್ಮರ್ ವಿರುದ್ಧ ಏಕೈಕ ಸೋಲನ್ನು ಕಂಡರು.
ಈ ಹಿಂದೆಯೂ ಅಂತಾರಾಷ್ಟ್ರೀಯ ಚೆಸ್ ಸ್ಪರ್ಧಾ ಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿರುವ ಸಮರ್ಥ್ ಕಳೆದ ತಿಂಗಳು ಸ್ಲೋವಾಕಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಜಯಿಸಿದ್ದರು.
ಸಮರ್ಥ್‌ನ ಈ ಸಾಧನೆಯಲ್ಲಿ ದೇಶ-ವಿದೇಶಗಳಲ್ಲಿ ನಡೆಯುತ್ತಿರುವ ಸ್ಪರ್ಧೆಗಳಿಗೆ ಈತನನ್ನು ಹೊತ್ತೊಯ್ಯುತ್ತಿರುವ ಈತನ ತಂದೆ ಜಗದೀಶ್ ರಾವ್ ಮತ್ತು ತಾಯಿ ವಿನುತಾರ ಶ್ರಮ-ತಾ್ಯಗಗಳು ಪ್ರಮುಖ ಪಾತ್ರ ವಹಿಸಿದೆ.
ಜಗದೀಶ್ ಹೊನ್ನಾವರದ ಸಿಂಡಿಕೇಟ್ ಬ್ಯಾಂಕ್‌ನ ಉದ್ಯೋಗಿಯಾಗಿದ್ದರೆ, ತಾಯಿ ಉಪನ್ಯಾಸಕಿಯಾಗಿದ್ದಾರೆ. ಹೊನ್ನಾವರದ ಎಸ್‌ಡಿಎಂ ಪ.ಪೂ ಕಾಲೇಜಿ ನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿರುವ ಸಮರ್ಥ್‌ನ ದೈಹಿಕ ಅಸಮರ್ಥತೆಯ ನಿಟ್ಟಿನಲ್ಲಿ ತಂಗಿ ಸಾನ್ವಿ ಮಾಡುತ್ತಿರುವ ಸಹಾಯ ಅನುಪಮ ಎಂದು ಅವರು ಅಭಿಪ್ರಾಯಪಡುತ್ತಾರೆ.
ಈ ಬಾರಿಯ ಅಮೇರಿಕಾ ಪ್ರವಾಸ ಸಾಕಾರಗೊಳ್ಳುವಲ್ಲಿ ಅಮೆರಿಕಾದ ನಂದಿ ಕನ್ನಡಕೂಟ ಮಿಯಾಮ ಇವರು ಊಟೋಪಚಾರದ ವೆಚ್ಚಗಳನ್ನು ಭರಿಸಿದರೆ, ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ವಿಮಾನದ ಪ್ರಯಾಣ ವೆಚ್ಚವನ್ನು ಭರಿಸಿದೆ. ಅಲ್ಲದೆ ಅಖಿಲ ಭಾರತ ಚೆಸ್ ಒಕ್ಕೂಟ, ವಿಕಲಾಂಗರ ಚೆಸ್ ಒಕ್ಕೂಟ ಗಳೂ ತಮ್ಮ ಸಹಕಾರವನ್ನು ನೀಡಿದ್ದವು ಎಂದು ಜಗದೀಶ್ ರಾವ್ ಸ್ಮರಿಸಿಕೊಳ್ಳುತ್ತಾರೆ.
ದೈಹಿಕ ಅಸಮರ್ಥತೆಯನ್ನು ಹೊಂದಿಯೂ ಸಮರ್ಥನೆಂಬ ಹೆಸರನ್ನು ಹೊಂದಿರುವ ಸಮರ್ಥ್, ತನ್ನ ಮಾನಸಿಕ ಸಾಮರ್ಥ್ಯದ ಮೂಲಕ ಅದನ್ನು ಅನ್ವರ್ಥಗೊಳಿಸಿದ್ದಾನೆ. ಈತನ ಮುಂದಿನ ಗುರಿ ಸರ್ವ ಸಮರ್ಥರೊಂದಿಗೆ ಸ್ಫರ್ಧೆಯಲ್ಲಿ ಭಾಗವಹಿಸಿ ಗೆಲುವು ಕಾಣುವುದಾಗಿದೆ.