ಪಲಿಮಾರು ಪರ್ಯಾಯಕ್ಕೆ ಸ್ವಾಗತ ಸಮಿತಿ ರಚನೆ
ಉಡುಪಿ, ಜೂ.30: 2018ರ ಜನವರಿ ತಿಂಗಳಲ್ಲಿ ನಡೆಯುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಪೀಠಾ ರೋಹಣದ ಪೂರ್ವಭಾವಿ ಸಭೆ ಇಂದು ಸಂಜೆ ಪಲಿಮಾರು ಮಠದ ಶ್ರೀವಿದ್ಯಾಮಾನ್ಯ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಪಲಿಮಾರು ಪರ್ಯಾಯದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಮೂಡಬಿದರೆಯ ಡಾ.ಮೋಹನ ಆಳ್ವ, ಸಂಸದೆ ಶೋಭ ಕರಂದ್ಲಾಜೆ ಹಾಗೂ ಉದ್ಯಮಿ ಜಿ.ಶಂಕರ್ ಅವರು ಪ್ರಧಾನ ಮಾರ್ಗದರ್ಶಕರಾಗಿರುವರು.
ಕಟೀಲಿನ ಹರಿನಾರಾಯಣ ಅಸ್ರಣ್ಣ, ಹೆರಂಜೆ ಕೃಷ್ಣ ಭಟ್, ರತ್ನಕುಮಾರ್, ಭುವನೇಂದ್ರ ಕಿದಿಯೂರು, ಮನೋಹರ್ ಶೆಟ್ಟಿ ಹಾಗೂ ಕೆ.ರಾಮಪ್ರಸಾದ್ ಭಟ್ ಚೆ್ನೈ ಇವರು ಸಂಚಾಲಕರಾಗಿರುವರು.
ಬಾಲಾಜಿ ರಾಘವೇಂದ್ರ ಆಚಾರ್ಯ ಇವರು ಸಮಿತಿ ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿನಾರಾಯಣ ರಾವ್ ಮಟ್ಟು, ಕೆ.ಎಸ್.ಪದ್ಮನಾಭ ಭಟ್ ಹಾಗೂ ಪ್ರಹ್ಲಾದ್ ಪಿ.ಆರ್. ಮುಖ್ಯಕಾರ್ಯದರ್ಶಿಗಳಾಗಿ,ರಮೇಶ್‌ರಾವ್ ಬೀಡು ಖಜಾಂಚಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯಕುಮಾರ್ ಸೊರಕೆ, ಧರ್ಮಸ್ಥಳದ ಡಿ.ಹರ್ಷೇಂದ್ರ ಹೆಗ್ಗಡೆ, ಡಾ.ಮೋಹನ್ ಆಳ್ವ, ಕಟೀಲಿನ ಲಕ್ಷ್ಮಿನಾರಾಯಣ ಅಸ್ರಣ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಮಂಗಳೂರಿನ ಪ್ರೊ.ಎಂ.ಬಿ.ಪುರಾಣಿಕ್, ಗುರ್ಮೆ ಸುರೇಶ್ ಶೆಟ್ಟಿ, ಪ್ರದೀಪ್‌ಕುಮಾರ್ ಕಲ್ಕೂರ ಮುಂತಾದವರು ಪರ್ಯಾಯ ಸಂಘಟನೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಪಲಿಮಾರು ಮಠದ ದಿವಾನರಾದ ವೇದವ್ಯಾಸ ತಂತ್ರಿ ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರಾಸ್ತಾವಿಕ ಮಾತು ಗಳನ್ನಾಡಿ ಪರ್ಯಾಯಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ಮಠದ ಮ್ಯಾನೇಜರ್ ಬಲರಾಮ ಭಟ್ ವಂದಿಸಿದರು.