ವಿದೇಶಿ ಪೌರತ್ವ ಪಡೆದವರಲ್ಲಿ ಭಾರತೀಯರೇ ಮುಂದು
ಮುಂಬೈ,ಜೂ.30: ವಿಶ್ವಾದ್ಯಂತ ಬೇರೆ ರಾಷ್ಟ್ರಗಳ ಪೌರತ್ವ ಪಡೆದುಕೊಂಡರಲ್ಲಿ ಭಾರತೀಯ ಮೂಲದವರು ಅಗ್ರಸ್ಥಾನದಲ್ಲಿದ್ದಾರೆ. 2015ರಲ್ಲಿ ಹೆಚ್ಚಿನವರು ಉದ್ಯೋಗ ವೀಸಾದಲ್ಲಿ ತೆರಳಿದ್ದ ವಲಸಿಗರು ಸೇರಿದಂತೆ ಭಾರತ ಮೂಲದ 1.30 ಲಕ್ಷ ಜನರು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ(ಒಇಸಿಡಿ)ಯ ಸದಸ್ಯ ರಾಷ್ಟ್ರಗಳ ಪೌರತ್ವ ಪಡೆದುಕೊಂಡಿದ್ದಾರೆ. ಒಇಸಿಡಿ ಐರೋಪ್ಯ ರಾಷ್ಟ್ರಗಳು, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಮತ್ತು ಜಪಾನ್ ಸೇರಿದಂತೆ 35 ಸದಸ್ಯ ರಾಷ್ಟ್ರಗಳನ್ನೊಳಗೊಂಡಿದೆ.
ವಿದೇಶಗಳ ಪೌರತ್ವ ಪಡೆದುಕೊಂಡ ಜನರ ಮೂಲದೇಶಗಳ ಪೈಕಿ ಭಾರತದ ನಂತರದ ಸ್ಥಾನಗಳಲ್ಲಿ ಮೆಕ್ಸಿಕೊ(1.12 ಲಕ್ಷ) ಮತ್ತು ಫಿಲಿಪ್ಪೀನ್ಸ್(94,000) ಇವೆ. ಚೀನಾ (78,000) ಐದನೇ ಸ್ಥಾನದಲ್ಲಿದೆ.
ಒಇಸಿಡಿ ಗುರುವಾರ ಪ್ಯಾರಿಸ್‌ನಲ್ಲಿ ಬಿಡುಗಡೆಗೊಳಿಸಿದ ಅಂತರರಾಷ್ಟ್ರೀಯ ವಲಸೆ ನೋಟ ವರದಿಯು ಈ ಅಂಕಿಅಂಶಗಳನ್ನು ಬೆಳಕಿಗೆ ತಂದಿದೆ. 2015ರಲ್ಲಿ 20 ಲಕ್ಷಕ್ಕೂ ಅಧಿಕ ಜನರು ಒಇಸಿಡಿ ರಾಷ್ಟ್ರಗಳ ಪೌರತ್ವ ಪಡೆದುಕೊಂಡಿದ್ದಾರೆ. ಕಳೆದ 10 ವರ್ಷಗಳಿಂದಲೂ ಪೌರತ್ವ ಸ್ವೀಕೃತಿ ಸರಾಸರಿಯಲ್ಲಿ ಹೆಚ್ಚಿನ ಬದಲಾವಣೆಯಿರದಿದ್ದರೂ 2015ರಲ್ಲಿ ವಿದೇಶಿ ಪೌರತ್ವ ಪಡೆದುಕೊಂಡವರ ಸಂಖ್ಯೆ 2014ಕ್ಕೆ ಹೋಲಿಸಿದರೆ ಶೇ.3ರಷ್ಟು ಏರಿಕೆಯನ್ನು ಕಂಡಿದೆ ಎಂದೂ ವರದಿಯು ತಿಳಿಸಿದೆ.