ಇರಾನ್ ಪರಮಾಣು ಒಪ್ಪಂದ ಜಾರಿಗೆ: ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಪ್ರಶಂಸೆ
ವಿಶ್ವಸಂಸ್ಥೆ, ಜೂ. 30: ವಿಶ್ವದ ಆರು ಬಲಿಷ್ಠ ದೇಶಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದವನ್ನು ಜಾರಿಗೊಳಿಸುತ್ತಿರುವುದಕ್ಕಾಗಿ ವಿಶ್ವಸಂಸ್ಥೆ ಮತ್ತು ಐರೋಪ್ಯ ಒಕ್ಕೂಟ ಗುರುವಾರ ಇರಾನನ್ನು ಪ್ರಶಂಸಿಸಿವೆ.
ಆದರೆ, ಪ್ರಕ್ಷೇಪಕ ಕ್ಷಿಪಣಿಗಳ ಉಡಾವಣೆಗಳಿಂದ ಹಿಡಿದು ಶಸ್ತ್ರಗಳ ಕಳ್ಳಸಾಗಣೆವರೆಗೆ ಇರಾನ್ ‘ವಿನಾಶಕಾರಿ ಹಾಗೂ ಅಸ್ಥಿರಗೊಳಿಸುವ’ ಕೃತ್ಯಗಳಲ್ಲಿ ತೊಡಗಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಆರೋಪಿಸಿದ್ದಾರೆ.
2015ರ ಜುಲೈಯಲ್ಲಿ ಸಹಿ ಹಾಕಿದ ಪರಮಾಣು ಒಪ್ಪಂದವನ್ನು ಅನುಮೋದಿಸುವ ವಿಶ್ವಸಂಸ್ಥೆಯ ನಿರ್ಣಯವನ್ನು ಜಾರಿಗೊಳಿಸುವ ವಿಷಯದಲ್ಲಿ ಭದ್ರತಾ ಮಂಡಳಿಯಲ್ಲಿ ನಡೆದ ಭಾಷಣಗಳು, ಇರಾನ್ ವಿಷಯದಲ್ಲಿ ಅಮೆರಿಕ ಮತ್ತು ಇತರ ಐದು ಸದಸ್ಯ ದೇಶಗಳ ನಡುವಿನ ಭಾರೀ ಭಿನ್ನಾಭಿಪ್ರಾಯಗಳನ್ನು ಬಹಿರಂಗಗೊಳಿಸಿದವು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾಂಗ್ರೆಸ್‌ನ ರಿಪಬ್ಲಿಕನ್ ಸದಸ್ಯರು ಮತ್ತು ಇಸ್ರೇಲ್ ಇರಾನ್ ಜೊತೆಗೆ ನಡೆದ ಪರಮಾಣು ಒಪ್ಪಂದವನ್ನು ಖಂಡಿಸಿದರು. ಒಪ್ಪಂದವು ಪರಮಾಣು ಕಾರ್ಯಕ್ರಮಗಳನ್ನು ಸ್ವಲ್ಪ ಮುಂದೂಡಿದ ಇರಾನ್‌ಗೆ ದೊರೆತೆ ಭರ್ಜರಿ ಉಡುಗೊರೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುವ ಮೂಲಕ ಇರಾನ್‌ನ ಆರ್ಥಿಕತೆಗೆ ಪುನಶ್ಚೇತನ ನೀಡಲಾಯಿತು ಹಾಗೂ ಭಯೋತ್ಪಾದಕ ಗುಂಪುಗಳಿಗೆ ಹೆಚ್ಚಿನ ಹಣವನ್ನು ನೀಡಲು ಅದಕ್ಕೆ ಅಧಿಕಾರ ನೀಡಲಾಯಿತು ಎಂದು ರಿಪಬ್ಲಿಕನ್ ಸಂಸದರು ಆರೋಪಿಸಿದರು.