ಕೋಮುವಾದ, ಅಸಹಿಷ್ಣುತೆ ವಿರುದ್ದ ಎಸೆಸ್ಸೆಫ್ ನಿಂದ ರ್ಯಾಲಿ
ಕಾಸರಗೋಡು, ಜೂ.30: ದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದ ಮತ್ತು ಅಸಹಿಷ್ಣುತೆ ವಿರುದ್ದ 'ಭಾರತವನ್ನು ಕೊಲೆಗಡುಕರ ರಾಷ್ಟ್ರ ಮಾಡದಿರಿ ' ಎಂಬ ಘೋಷಣೆಯಡಿ ಎಸ್ಎಸ್ಎಫ್ ಕಾಸರಗೋಡು ಡಿವಿಜನ್ ಶುಕ್ರವಾರ ಕಾಸರಗೋಡು ನಗರದಲ್ಲಿ ರ್ಯಾಲಿ ಆಯೋಜಿಸಿತ್ತು. ಗೋವಿನ ಹೆಸರಲ್ಲಿ ಕೊಲೆ, ಹಿಂಸೆ ತಾಂಡವಾಡುತ್ತಿದೆ. ಕೇಂದ್ರ ಸರಕಾರ ಹಾಗೂ ಕಾನೂನು ಪಾಲಕರ ಮೌನದಿಂದ ಭಾರತದ ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಜನತೆ ಒಂದಾಗಬೇಕು. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಅಗತ್ಯ ಎಂದು ಅಭಿಪ್ರಾಯಪಡಲಾಯಿತು.
ಕಾಸರಗೋಡು ಡಿವಿಜನ್ ಅಧ್ಯಕ್ಷ ಶಂಶೀರ್ ಜೈನಿ ಅಧ್ಯಕ್ಷತೆಯಲ್ಲಿ ಸಿದ್ದಿಕ್ ಪುದುಪ್ಪಾಳ ಉದ್ಘಾಟಿಸಿದರು. ಫಾರೂಕ್ ಸಖಾಫಿ, ತಸ್ಲೀಮ್ ಕುನ್ನಿಲ್ , ಸ್ವಾದಿಕ್ ಎರ್ಮಲಂ ಮೊದಲಾದವರು ಉಪಸ್ಥಿತರಿದ್ದರು.ಝುಬೈರ್ ಬಾಡೂರು ಸ್ವಾಗತಿಸಿದರು. ಉನೈಸ್ ರಹಮಾನ್ ವಂದಿಸಿದರು.
ಪಿಲಿಕುಂಜೆಯಿಂದ ಹೊರಟ ರ್ಯಾಲಿ ನಗರ ಪ್ರದಕ್ಷಿಣೆ ಬಂದು ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಕೊನೆಗೊಂಡಿತು.