ಶೇ.80ರಷ್ಟು ಅವಶ್ಯಕ ವಸ್ತುಗಳಿಗೆ ಶೇ.18ರೊಳಗೆ ಜಿಎಸ್‌ಟಿ
ಹೊಸದಿಲ್ಲಿ,ಜೂ.30: ದೇಶದ ಅರ್ಥಿಕ ವ್ಯವಸ್ಥೆಗೆ ಹೊಸ ತಿರುವನ್ನೇ ನೀಡುವುದೆಂದು ಭಾವಿಸಲಾಗಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಯ ಜಾರಿಯಿಂದ ಉಪ್ಪು ಹಾಗೂ ಸೋಪುಗಳು ಸೇರಿದಂತೆ ಹಲವಾರು ಅವಶ್ಯಕ ವಸ್ತುಗಳ ಬೆಲೆಗಳು ಬದಲಾವಣೆಯಾಗದು. ಯಾಕೆಂದರೆ ಹಲವಾರು ದಿನಬಳಕೆಯ ವಸ್ತುಗಳಿಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಅಥವಾ ಜಿಎಸ್‌ಟಿಯನ್ನು ಹಾಲಿ ತೆರಿಗೆಯ ಮಟ್ಟಕ್ಕೆ ನಿಗದಿಪಡಿಸಲಾಗಿದೆ.
ಚಹಾಪುಡಿ, ಖಾದ್ಯ ತೈಲ, ಸಕ್ಕರೆ, ಜವಳಿ ಹಾಗೂ ಶಿಶು ಆಹಾರಗಳಿಗೆ ಕೇವಲ ಶೇ.5ರಷ್ಟು ತೆರಿಗೆ ವಿಧಿಸಲಾಗಿದೆ. ತೆರಿಗೆಗೆ ಯೋಗ್ಯವಾದ ಸಾಮಾಗ್ರಿಗಳ ಪೈಕಿ ಶೇ.19ರಷ್ಟಿರು ಮೋಟಾರ್ ಸೈಕಲ್, ಸುಗಂಧದ್ರವ್ಯ ಹಾಗೂ ಶಾಂಪೂ ಸೇರಿದಂತೆ ಹಲವಾರು ವಿಲಾಸಿ ಸಾಧನಗಳಿಗೆ ಶೇ.18 ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಲಾಗಿದೆ.
ಜಿಎಸ್‌ಟಿಯ ಬಗ್ಗೆ ಮಾಹಿತಿ ನೀಡಲು ತೆರಿಗೆ ಇಲಾಖೆಯು ಕಳೆದ ಹಲವು ತಿಂಗಳುಗಳಿಂದ ಶ್ರಮಿಸುತ್ತಿದೆ. ನೂತನ ತೆರಿಗೆ ವ್ಯವಸ್ಥೆಯು, ವಾಣಿಜ್ಯ ರಂಗದಲ್ಲಿ ಪಾರದರ್ಶಕತೆಯನ್ನು ತರಲಿದ್ದು, ಕರಗಳ್ಳತನವನ್ನು ತಡೆಯಲು ನೆರವಾಗಲಿದೆ ಹಾಗೂ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.
ಜಿಎಸ್‌ಟಿ ಜಾರಿಯ ಮುನ್ನ 10 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವ ವರ್ತಕರು ವ್ಯಾಟ್ ತೆರಿಗೆಯನ್ನು ಪೂರ್ಣ ದರದಲ್ಲಿ ಪಾವತಿಸಬೇಕಾಗಿತ್ತು. ಆದರೆ ಅವರಿಗೆ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇದೀಗ 20ರಿಂದ 75 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಕೇವಲ ಶೇ.2.5ರಷ್ಟು ತೆರಿಗೆ ವಿಧಿಸಲಾಗುವುದು. 20 ಲಕ್ಷ ರೂ.ವರೆಗೆ ವ್ಯವಹಾರ ನಡೆಸುವ ಉದ್ಯಮಿಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ಸಾಮಾನ್ಯ ಕುಟುಂಬಗಳಿಗೂ ಜಿಎಸ್‌ಟಿ ಒಂದು ವರದಾನವಾಗಿದೆ. ಶೇ. 81ರಷ್ಟು ಆವಶ್ಯಕ ಸಾಮಾಗ್ರಿಗಳು ಶೇ.18ರೊಳಗಿನ ಜಿಎಸ್‌ಟಿ ತೆರಿಗೆಯ ವ್ಯಾಪ್ತಿಗೆ ಬರಲಿವೆ. ಬೆಣ್ಣೆ, ತುಪ್ಪ, ಬಾದಾಮಿ, ಹಣ್ಣಿನ ರಸ, ಮೊಬೈಲ್ ಫೋನ್‌ಗಳು ಹಾಗೂ ಕೊಡೆ ಮತ್ತಿತರ ಸಾಮಾಗ್ರಿಗಳ ಮೇಲೆ ಜಿಎಸ್‌ಟಿ ತೆರಿಗೆಯನ್ನು ಶೇ.12ರೊಳಗಿರಿಸಲಾಗಿದೆ. ಟೂಥ್‌ಪೇಸ್ಟ್, ತಲೆಗೂದಲ ಎಣ್ಣೆ,ಸೋಪ್, ಐಸ್‌ಕ್ರೀಮ್ ಹಾಗೂ ಪ್ರಿಂಟರ್‌ಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ಚೂಯಿಂಗ್‌ಗಮ್, ಚಾಕೊಲೇಟ್, ಕಸ್ಟರ್ಡ್ ಪೌಡರ್ ಹಾಗೂ ಚಾಕಲೇಟ್ ಯುಕ್ತ ವ್ಯಾಫರ್‌ಗಳ ಮೇಲೆ ಅತ್ಯಧಿಕ ದರದಲ್ಲಿ ಅಂದರೆ ಶೇ.28ರಷ್ಟು ತೆರಿಗೆ ವಿಧಿಸಲಾಗಿದೆ.
ಇದರ ಜೊತೆಗೆ ಕಾರುಗಳು, ಹವಾನಿಯಂತ್ರಕಗಳು, ರೆಫ್ರಿಜರೇಟರ್‌ಗಳು ಹಾಗೂ ಕೆಲವು ಕೈಗಾರಿಕಾ ಉಪಕರಣಗಳಿಗೂ ಶೇ.28ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ಜಿಎಸ್‌ಟಿ ಜಾರಿಯ ಬಳಿಕ ವ್ಯಾಪಾರಿಗಳು ಆನ್‌ಲೈನ್ ಮೂಲಕ ತಮ್ಮ ರಿಟರ್ನ್‌ಗಳನ್ನು ಸಲ್ಲಿಸಬೇಕಾಗುತ್ತದೆ. ರಿಟೇಲ್ ವ್ಯಾಪಾರಿಗಳು ತಿಂಗಳಿಗೊಮ್ಮೆ ತಮ್ಮ ಜಿಎಸ್‌ಟಿ ರಿಟರ್ನ್‌ಗಳನ್ನು ಆನ್‌ಲೈನ್ ಮೂಲಕ ಫಾರಂ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಅವರ ರಿಟರ್ನ್ ಸಲ್ಲಿಕೆಯನ್ನು, ಲಭ್ಯವಿರುವ ಕ್ರೆಡಿಟ್ ಇನ್‌ಪುಟ್ ಜೊತೆ ತಾಳೆ ಮಾಡಲಾಗುವುದು ಹಾಗೂ ಆ ಬಳಿಕ ಅವರು ಪಾವತಿಸಬೇಕಾದ ತೆರಿಗೆ ಬಾಧ್ಯತೆಯನ್ನು ಕಂಪ್ಯೂಟರ್ ಮೂಲಕ ನಿರ್ಧರಿಸಲಾಗುವುದು.
‘‘ಇಂದು ಆದಾಯ ತೆರಿಗೆ ರಿಟರ್ನ್‌ಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಲಾಗುತ್ತಿದೆ.ಅದೇ ರೀತಿ ಜಿಎಸ್‌ಟಿ ರಿಟರ್ನ್‌ನ್ನು ಅನ್‌ಲೈನ್ ಮೂಲಕ ಸಲ್ಲಿಸುವುದು ಅತ್ಯಂತ ಸರಳ ಹಾಗೂ ಸುಲಭವಾದುದು’’ ಎಂದು ಅಧಿಯಾ ಹೇಳುತ್ತಾರೆ.