×
Ad

ಸಹ್ಯಾದ್ರಿ ಮಹಾ ವಿದ್ಯಾಲಯದ ಪದವಿ ಪ್ರದಾನ

Update: 2017-07-01 18:03 IST

ಮಂಗಳೂರು, ಜು.1: ನಗರದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ತಾಂತ್ರಿಕ ಮತ್ತು ಆಡಳಿತ ಮಹಾ ವಿದ್ಯಾಲಯದ 643 ವಿದ್ಯಾರ್ಥಿಗಳಿಗೆ ಶನಿವಾರ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರಿನ ಗ್ಲೋಬಲ್ ಹೆಡ್-ಹೈಟೆಕ್ ಇಂಡಸ್ಟ್ರೀ ಸೊಲ್ಯೂಶನ್ಸ್ ಘಟಕದ ಉಪಾಧ್ಯಕ್ಷ ನಾಗರಾಜ್ ಇಜಾರಿ ಮಾತನಾಡಿ, ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಕಠಿಣ ಪರಿಶ್ರಮದ ಫಲವಾಗಿ ತಾವಿಂದು ಪದವೀಧರರಾಗಿ ಸಮಾಜಕ್ಕೆ ಅರ್ಪಿತರಾಗಿದ್ದೀರಿ. ತಾಂತ್ರಿಕ ಜಗತ್ತು ಇಂದು ಕ್ರಾಂತಿಯತ್ತ ಸಾಗುತ್ತಿದೆ. ಅದರ ಮಧ್ಯೆ ನೂರಾರು ಸಮಸ್ಯೆಗಳೂ ತಲೆ ಎತ್ತುತ್ತಿವೆ. ತಾಂತ್ರಿಕ ಜಗತ್ತಿನ ಸವಾಲುಗಳನ್ನು ಎದುರಿಸುತ್ತಾ, ಸಮಾಜದ ಸಮಸ್ಯೆಗೆ ಸ್ಪಂದಿಸುತ್ತಾ, ತಮ್ಮ ಭವಿಷ್ಯವನ್ನೂ ಸುಭದ್ರಪಡಿಸುತ್ತಾ ಮುನ್ನುಗ್ಗಿ ಎಂದು ಕರೆ ನೀಡಿದರು.

ಕಲಿಕೆ ಎಂಬುದು ಪದವಿಯೊಂದಿಗೆ ಕೊನೆಯಾಗುವುದಿಲ್ಲ. ಅದು ನಿರಂತರವಾಗಿರುತ್ತದೆ. ಸಮಾಜದಲ್ಲಿ ಅವಕಾಶಗಳು ಸಾಕಷ್ಟಿವೆ. ಅದನ್ನು ಯಾವ ಮಾರ್ಗದಲ್ಲಿ ಸ್ವೀಕರಿಸಬೇಕು ಎಂಬುದರ ಬಗ್ಗೆ ಯೋಚಿಸಬೇಕು ಮತ್ತು ಪ್ರತಿಯೊಂದು ಕೆಲಸದಲ್ಲೂ ಶ್ರದ್ಧೆ ವಹಿಸಬೇಕು. ಆವಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಿದೆ. ಜೀವನದಲ್ಲಿ ಕನಸು ಕಾಣುವುದರೊಂದಿಗೆ ಒಂದು ತಂಡವಾಗಿ ಕ್ರಿಯಾಶೀಲರಾಗಿ ಎಂದು ನಾಗರಾಜ್ ಇಜಾರಿ ನುಡಿದರು.

ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಮುಖ್ಯಸ್ಥ ಇ.ಎಸ್. ಚಕ್ರವರ್ತಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಭಂಡಾರಿ ನಾಲ್ಕು ವರ್ಷದ ಹಿಂದೆ ತಾವು ತಮ್ಮ ಹೆತ್ತವರ ಜೊತೆಗೂಡಿ ಈ ಸಂಸ್ಥೆಗೆ ಸೇರ್ಪಡೆಗೊಂಡಾಗ ನಾವು ಯಾವೆಲ್ಲ ಭರವಸೆ ನೀಡಿದ್ದೇವೆಯೋ ಅದನ್ನು ಈಡೇರಿಸಿದ ವಿಶ್ವಾಸ ನನಗಿದೆ. ಇಲ್ಲಿ ಪದವೀಧರರಾದ ವಿದ್ಯಾರ್ಥಿಗಳು ಕೇವಲ ಅಕಾಡಮಿಕ್ ಪದವೀಧರರಲ್ಲ, ವೌಲ್ಯಯುತ ಶಿಕ್ಷಣ ಪಡೆದ ಪ್ರತಿಭಾನ್ವಿತರು. ಇಲ್ಲಿ ಪದವೀಧರರಾದ ಅನೇಕ ವಿದ್ಯಾರ್ಥಿಗಳು ವಿಶ್ವದ ನಾನಾ ಕಂಪೆನಿಗಳಲ್ಲಿ ವಾರ್ಷಿಕ 14 ಲಕ್ಷ ರೂ. ವೇತನ ಪಡೆದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆ ತರುವ ವಿಚಾರವಾಗಿದೆ ಎಂದರು.

ಸಂಸ್ಥೆಯ ಡೀನ್ ಡಾ. ಜೆ.ವಿ. ಗೊರಬಾಲ್ ಪ್ರಮಾಣ ವಚನ ಬೋಧಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ. ಮಹೇಶ್ ಬಿ.ದಾವಣಗೆರೆ, ಡಾ. ಅಶ್ವತ್ ರಾವ್, ಪ್ರೊ. ಸುಧೀರ್ ಶೆಟ್ಟಿ, ಅಖಿಲಾ ತೇಜಸ್ವಿ, ಡಾ. ಪ್ರೇಮಾನಂದ ಶೆಣೈ ಪದವೀಧರರ ಹೆಸರು ವಾಚಿಸಿದರು. ಪದವೀಧರರಾದ ಪೂಜಾ ಮತ್ತು ಚಿನ್ಮಯಾಭರಣ್ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕ ಡಾ.ಡಿ.ಎಲ್. ಪ್ರಭಾಕರ ಉಪಸ್ಥಿತರಿದ್ದರು.

ಸಹ್ಯಾದ್ರಿ ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲ ಪ್ರೊ. ಎಸ್.ಎಸ್. ಬಾಲಕೃಷ್ಣ ಸ್ವಾಗತಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಎಂ. ಭೂಷಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News