×
Ad

ಪೇಜಾವರ ಶ್ರೀಗಳ ಇಫ್ತಾರ್ ಕೂಟ ಕೋಮು ಸೌಹಾರ್ಧತೆಗೆ ಪೂರಕ: ಶಕುಂತಳಾ ಶೆಟ್ಟಿ

Update: 2017-07-01 18:17 IST

ಪುತ್ತೂರು, ಜು.1: ಪೇಜಾವರ ಶ್ರೀಗಳು ಇಫ್ತಾರ್ ಕೂಟ ಮಾಡಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಬೇರೆಯಲ್ಲ ಎಂಬ ಸಂದೇಶ ರವಾನಿಸಿರುವುದು ಕೋಮು ಸೌಹಾರ್ಧತೆಗೆ ಪೂರಕವಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಚಿಂತನ- ಮಂಥನ ಸಭೆಯಲ್ಲಿ ಮಾತನಾಡಿದರು.

ಪಶು ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರ ಗೋವುಗಳನ್ನು ಹತ್ಯೆ ಮಾಡಿ ಎಂದು ಎಲ್ಲೂ ಹೇಳಿಲ್ಲ. ಇಂತಹ ಗೊಂದಲಗಳಿಗೆ ಅವಕಾಶವೇ ಬೇಡ ಎಂದ ಅವರು ಪ್ರ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿಯೂ ಇಂತಹ ವಿಚಾರ ಇಟ್ಟುಕೊಂಡು ಕೋಮುವಾದ ಬಿತ್ತಲಾಗುತ್ತದೆ. ಇದರ ಮೂಲ ಉದ್ದೇಶ ಚುನಾವಣೆ ಎನ್ನುವುದನ್ನು ನಾವು ಅರಿತುಕೊಳ್ಳುವ ಜೊತೆಗೆ ಕೋಮುವಾದಕ್ಕೆ ಅವಕಾಶ ನೀಡಬಾರದು. ಮಠ, ಮಂದಿರ, ಮಸೀದಿಯಲ್ಲಿ ಪರಿವರ್ತನೆಯಾದಾಗ ಮಾತ್ರ ಎಲ್ಲಾ ಸಮುದಾಯ ಒಂದಾಗಲು ಸಾಧ್ಯ ಎಂದವರು ತಿಳಿಸಿದರು.  

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕೋಮುವಾದಕ್ಕೆ ಅವಕಾಶವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದ ತಡೆಯುವಲ್ಲಿ ಪೊಲೀಸರು ಸಮರ್ಥರಾಗಿದ್ದು, ಅವರನ್ನು ಶ್ಲಾಘಿಸಬೇಕಾಗಿದೆ. ಜಿಲ್ಲೆಯಲ್ಲಿ ಎರಡು ಕೊಲೆ ಪ್ರಕರಣ ,ಎರಡು ಚೂರಿ ಇರಿತ ಪ್ರಕರಣಗಳು ನಡೆದಿದ್ದರೂ ಜಿಲ್ಲೆಯಲ್ಲಿ ಕೋಮು ಗಲಭೆ ನಡೆದಿಲ್ಲ . ಇದಕ್ಕೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಉತ್ತಮ ಕಾರ್ಯವೈಖರಿಯೇ ಕಾರಣ ಎಂದರು.

ಕಾಂಗ್ರೆಸ್ ವತಿಯಿಂದ ನಡೆಸಲಾದ ಅಭಿವೃದ್ಧಿ ಕೆಲಸ ಕಾರ್ಯಗಳು ಪ್ರಚಾರ ಪಡೆದುಕೊಳ್ಳುವುದಿಲ್ಲ. ನಾವು ಮಾಡಿದ ಕೆಲಸದ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷದ ವತಿಯಿಂದ ಮಾಡಲಾದ ಅಭಿವೃದ್ಧಿ ಕೆಲಸಗಳ ಪ್ರಚಾರವನ್ನು ನಡೆಸಬೇಕು ಎಂದ ಅವರು ಪುತ್ತೂರಿನಲ್ಲಿ ಮುಂದೆ ಅಲ್ಪಸಂಖ್ಯಾತ ಸಮಾವೇಶ ಮಾಡಬೇಕೆಂಬ ಉದ್ದೇಶವಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಪುರಸಭೆ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಯೋಜಕ ನೂರುದ್ದೀನ್ ಸಾಲ್ಮರ , ಕಾಂಗ್ರೆಸ್ ಸೇವಾದಳ ಪುತ್ತೂರು ಘಟಕದ ಅಧ್ಯಕ್ಷ ಜೋಕಿಂ ಡಿ.ಸೋಜಾ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ತಾಲ್ಲೂಕು ಪಂಚಾಯತ್ ಸದಸ್ಯೆ ಫೌಝಿಯಾ ಇಬ್ರಾಹಿಂ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಸಾಯಿರಾ ಜುಬೈರಾ, ವಕೀಲ ಎಂ.ಪಿ. ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆಯ ಮಾಜಿ ಸದಸ್ಯ ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News