ಎನ್‌ಎಸ್‌ಎಸ್‌ನಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಪ್ರೊ.ಕೆ.ಭೈರಪ್ಪ
ಕೊಣಾಜೆ, ಜು.1: ರಾಷ್ಟ್ರೀಯ ಸೇವಾ ಯೋಜನೆಯು ನಮ್ಮಲ್ಲಿ ಆತ್ಮಸ್ಥೈರ್ಯ, ಶಿಸ್ತು, ಸಮಾಜಸೇವಾ ಮನೋಭಾವನೆಯನ್ನು ಬೆಳೆಸುವುದರೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಪುರುಷರ ವಸತಿ ಗ್ರಹದ ಸಭಾಂಗಣದಲ್ಲಿ ಶನಿವಾರ ವಿಶ್ವವಿದ್ಯಾಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಆಯ್ಕೆ ಮತ್ತು ನಾಯಕತ್ವ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
37 ವರ್ಷಗಳ ಹಿಂದೆ ಆರಂಭಗೊಂಡ ಮಂಗಳೂರು ವಿವಿಯಲ್ಲಿ ಇದೀಗ ಸುಮಾರು 16ಸಾವಿರದಷ್ಟು ರಾಷ್ಟೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿದ್ದರೆ, ನೂರು ವರ್ಷಗಳ ಇತಿಹಾಸವಿರುವ ಮೈಸೂರು ವಿವಿಯಲ್ಲಿ 15 ಸಾವಿರ ಶಿಬಿರಾರ್ಥಿಗಳಿದ್ದಾರೆ. ಮಂಗಳೂರು ವಿವಿಯು ಇಂತಹ ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಪ್ರೋತ್ಸಾಹ ನೀಡುತ್ತಿರುವುದು ಇದಕ್ಕೆ ಕಾರಣ. ಜೊತೆಗೆ ಮಂಗಳೂರು ವಿವಿಯು ಸ್ನಾತಕೋತ್ತರ ವಿಭಾಗಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಭ್ಯರ್ಥಿಗಳಿಗೆ ಒಂದು ಸೀಟನ್ನು ಮೀಸಲಾಗಿರಿಸಲಾಗಿದೆ. ನಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸುವ ಇಂತಹ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು.
ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ಪ್ರಸಾದ್ ರೈ ಕಲ್ಲಿಮಾರ್ ಅವರು, ಇಂದು ಆಧುನಿಕ ಜನಜೀವನದಲ್ಲಿ ನಾವು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವುದಕ್ಕೆ ಎನ್‌ಎಸ್‌ಎಸ್ ಪೂರಕವಾಗಿ. ಇದರಿಂದ ಸಾಮರಸ್ಯತೆಯ ಭಾವದೊಂದಿಗೆ ಸೇವಾ ಮನೋಬಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.