ಸಹಪಾಠಿಗಳಿಗೆ “ರಾಕ್ಷಸಿ”ಯಾಗಿ ಕಂಡವಳು ”ವಿಶ್ವ ಸುಂದರಿ” ಪಟ್ಟದ ನಿರೀಕ್ಷೆಯಲ್ಲಿ!
ಮಲೇಶ್ಯಾ, ಜು.1: ಮುಖ ಹಾಗೂ ದೇಹದ ತುಂಬಾ ಮಚ್ಚೆಗಳಿದ್ದ ಕಾರಣ ಸಹಪಾಠಿಗಳಿಂದ ಅವಮಾನಕ್ಕೊಳಗಾಗಿ, ಸಂಕಷ್ಟಗಳನ್ನು ಎದುರಿಸುತ್ತಾ ಬದುಕು ಸಾಗಿಸಿದ್ದ 20 ವರ್ಷದ ಯುವತಿಯೋರ್ವಳು ಸವಾಲುಗಳನ್ನು ಮೆಟ್ಟಿ “ಮಲೇಶ್ಯಾ ಮಿಸ್ ಯುನಿವರ್ಸ್” ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಧನೆ ಮೆರೆದಿದ್ದಾಳೆ.
ಎವಿಟಾ ಡೆಲ್ಮುಂಡೋ ಹುಟ್ಟುತ್ತಲೇ ಮುಖ ಹಾಗೂ ದೇಹದ ತುಂಬಾ ಮಚ್ಚೆಗಳಿತ್ತು. ಜನ್ಮತಃ ಈ ವಿಚಿತ್ರ ಸಮಸ್ಯೆಗೆ ತುತ್ತಾಗಿದ್ದ ಬಾಲಕಿಗೆ ಶಾಲಾ ದಿನಗಳೇ ಅತ್ಯಂತ ಕಠಿಣವಾಗಿ ಪರಿಣಮಿಸಿತ್ತು. ಸಹಪಾಠಿಗಳು ಆಕೆಯನ್ನು “ರಾಕ್ಷಸಿ”, “ಚೊಕೊಲೆಟ್ ಚಿಪ್ ಕುಕ್ಕೀ” ಎಂದೆಲ್ಲಾ ಅಪಹಾಸ್ಯ ಮಾಡುತ್ತಿದ್ದರು.
“ಆ ದಿನಗಳು ಅತ್ಯಂತ ಕಠಿಣವಾಗಿತ್ತು. ಸಹಪಾಠಿಗಳು ನನ್ನನ್ನು “ರಾಕ್ಷಸಿ” ಎಂದೆಲ್ಲಾ ಹೀಯಾಳಿಸುತ್ತಿದ್ದರು. ಪುಟ್ಟ ಬಾಲಕಿಯಾಗಿ ಅದೆಲ್ಲವನ್ನೂ ಎದುರಿಸುವುದು ಅತ್ಯಂತ ಕಷ್ಟಕರವಾಗಿತ್ತು. ಪ್ರಾಥಮಿಕ ಶಾಲೆಯಲ್ಲಿ ಯಾರೂ ನನ್ನೊಂದಿಗೆ ಗೆಳೆತನ ಬಯಸುತ್ತಿರಲಿಲ್ಲ. ನಾನು ಒಂಟಿಯಾಗಿದ್ದೆ” ಎನ್ನುತ್ತಾರೆ ಎವಿಟಾ.
ಹಿರಿಯ ಪ್ರಾಥಮಿಕ ಶಿಕ್ಷಣದ ಸಂದರ್ಭ ಎವಿಟಾಗೆ ಸಾಕಷ್ಟು ಆತ್ಮವಿಶ್ವಾಸ ಬಂದಿತ್ತು. ಅಲ್ಲಿನ ಸಹಪಾಠಿಗಳು ಆಕೆಯನ್ನು ಹೀಯಾಳಿಸುತ್ತಿರಲಿಲ್ಲ, ಪೋಷಕರು ಹಾಗೂ ಶಿಕ್ಷಕರು ಆಕೆಗೆ ಆತ್ಮವಿಶ್ವಾಸ ತುಂಬಿದರು. ನಂತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಸ್ತ್ರಚಿಕಿತ್ಸೆ ನಡೆಸಬೇಕು ಎನ್ನುವ ಪೋಷಕರ ಮಾತನ್ನೂ ತಿರಸ್ಕರಿಸಿದ ಎವಿಟಾ ಇದೀಗ ಮಿಸ್ ಯುನಿವರ್ಸ್ ಮಲೇಶ್ಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾಳೆ.
ಸ್ಥಳೀಯ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿರುವ ಎವಿಟಾ ತನ್ನ ಕಥೆ ತನ್ನಂತೆಯೇ ಜನ್ಮತಃ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾದರಿಯಾಗಬಹುದು ಎಂದು ಭಾವಿಸುತ್ತಾರೆ.
ಜೂನ್ 17ರಂದು ಎವಿಟಾ ಮಿಸ್ ಯುನಿವರ್ಸ್ ಮಲೇಶ್ಯಾದ ಆಡಿಷನ್ ನಲ್ಲಿ ಭಾಗವಹಿಸಿದ್ದಾರೆ. ಇದೀಗ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ತಾನು ಜಯಿಸದಿದ್ದರೂ ಇದು ನನ್ನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುವುದಿಲ್ಲ. ನಾನು ಇನ್ನಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿಯೇ ತೀರುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಎವಿಟಾ.