×
Ad

ರಾಷ್ಟ್ರೀಯ ಸಾಂಖ್ಯಿಕ ದಿನ ಆಚರಣೆ

Update: 2017-07-01 19:27 IST

ಮಂಗಳೂರು, ಜು.1: ಸಂಖ್ಯಾ ಶಾಸ್ತ್ರದ ಪಿತಾಮಹ ಪ್ರೊ ಪಿ.ಸಿ.ಮಹಾಲನೋಬಿಸ್ ಅವರ 124ನೆ ಜನ್ಮ ದಿನಾಚರಣೆಯನ್ನು ಸರಕಾರದ ನಿರ್ದೇಶನದಂತೆ ರಾಷ್ಟ್ರೀಯ ಸಾಂಖ್ಯಿಕ ದಿನವನ್ನಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಆಚರಿಸಲಾಯಿತು.

 ಮುಖ್ಯ ಅತಿಥಿಯಾಗಿದ್ದ ಜೈನ್ ಹೈಸ್ಕೂಲ್ ಮೂಡಬಿದ್ರೆ ಇಲ್ಲಿಯ ಉಪಾಧ್ಯಾಯ ವಿನಯಚಂದ್ರ ಅವರು ಮಾತನಾಡಿ, ಒಂದು ದೇಶದ ಭೌತಿಕವಾದ ಬೆಳವಣಿಗೆಯನ್ನು ಸಂಖ್ಯೆಗಳ ಮೂಲಕವೇ ಗುರುತಿಸಲಾಗುತ್ತದೆ. ಆದರೆ ಇಂದು ಜಾಗತೀಕಕರಣ, ಉದಾರೀಕರಣ, ಖಾಸಗೀಕರಣ ಎಂಬ ಆರ್ಥಿಕ ನೀತಿಗಳಿಂದಾಗಿ ದೇಶದ ಗುಡಿಕೈಗಾರಿಕೆಗಳು ನಾಶದ ಅಂಚಿನಲ್ಲಿವೆ ಎಂದರು.

  ಉದಾರೀಕರಣದಿಂದಾಗಿ ಅಂತರಾಷ್ಟ್ರೀಯ ವಸ್ತುಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟು ದೇಶಿ ಕೈಗಾರಿಕೆಗಳನ್ನು ಹಾಗೂ ದೇಶದ ಆರ್ಥಿಕ ವ್ಯವಸ್ಥೆಯನ್ನು ನಾಶ ಮಾಡುವಲ್ಲಿ ಸಫಲವಾಗುತ್ತಿರುವುದು ವೇದ್ಯವಾಗುತ್ತಿದೆ. ಇಂದು ಭಾರತಕ್ಕೆ ಚೀನಾ ದೇಶದಿಂದ ಅತೀ ಹೆಚ್ಚು ವಸ್ತುಗಳು, ಸರಕುಗಳು ಮಾರುಕಟ್ಟೆಗೆ ಬರುತ್ತಿದ್ದು ಒಂದು ಅಂದಾಜಿನ ಪ್ರಕಾರ 20,000 ಶತಕೋಟಿ ಡಾಲರ್‌ಗಳ ವಹಿವಾಟನ್ನು ನಡೆಸುತ್ತಿದೆ ಎಂಬುದು ಒಂದು ಆಘಾತಕಾರಿ ಅಂಶ ಎಂದರು.

  ಚೀನಾ ದೇಶ ಇಂದು ಆರ್ಥಿಕ ಭಯೋತ್ಪಾದನೆಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಉಂಟು ಮಾಡುತ್ತಿದೆ. ಉತ್ಪನ್ನ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಇಡೀ ವಿಶ್ವದ ಮಾರುಕಟ್ಟೆಯನ್ನೇ ತನ್ನ ಅಧೀನಕ್ಕೆ ಪಡೆದುಕೊಳ್ಳಲು ಹವಣಿಸುತ್ತಿದೆ. ವಿಶ್ವದಲ್ಲಿ ಏಕ ಸ್ವಾಮ್ಯವನ್ನು ಮೆರೆಯಲು ತನ್ನೆಲ್ಲಾ ತಂತ್ರಗಳನ್ನು ಉಪಯೋಗಿಸುತ್ತಿದೆ ಎಂದು ತಿಳಿಸಿದರು.

ಪಿ.ಸಿ.ಮಹಾಲನೋಬಿಸ್ ಅವರ ಸಂಸ್ಮರಣೆ ಪ್ರಯುಕ್ತ ಗಣ್ಯರು ಪುಷ್ಪನಮನ ಸಲ್ಲಿಸಿದರು.

ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಂ.ವಿ.ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೇದಶ್ರೀ ಆಚಾರ್ಯ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ ರಿಚಿ ಜುವೆಲ್ ಡಿಕೋಸ್ತ, ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜು ಪುತ್ತೂರು ಹಾಗೂ ತೃತೀಯ ಬಹುಮಾನ ಮರಿಯ ಸುಸಾನ್ ಝಕಾರಿಯಾ, ಸಂತ ಆಗ್ನೇಸ್ ಪದವಿಪೂರ್ವ ಕಾಲೇಜು ಮಂಗಳೂರು ಇವರು ಪಡೆದರು. ಎಂ.ವಿ.ನಾಯಕ್ ಬಹುಮಾನ ವಿತರಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ.ಉದಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ನಿರ್ದೇಶಕ ಮನಮೋಹನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಮಾರುತಿ ಪ್ರಸಾದ್ ಬಿ.ವಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News