ದೇರಳಕಟ್ಟೆ ನಿಟ್ಟೆ ವಿವಿಯಲ್ಲಿ ವೈದ್ಯರ ದಿನಾಚರಣೆ
ಕೊಣಾಜೆ, ಜು.1: ಶಿಕ್ಷಣ ಎಂದರೆ ಪರಿವರ್ತನೆಗೆ ಪೂರಕವಾಗಿರಬೇಕು, ಅಂತಹ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗಿಡ, ಕಳೆಗಳನ್ನು ಕಿತ್ತು ಪರಿಸರ ಉದ್ಯಾನ ಸುಂದರಗೊಳಿಸಿದಂತೆ ನಮ್ಮ ಮನದಲ್ಲಿರುವ ಸ್ವಾರ್ಥ, ಮೋಹ, ಮದ, ಮತ್ಸರ ಇವೆಲ್ಲವೂ ಶಿಕ್ಷಣದ ಮೂಲಕ ತೊಲಗುವಂತಾಗಬೇಕು ಎಂದು ಖ್ಯಾತ ವೈದ್ಯ ಎಂ.ಪಿ.ಶೆಟ್ಟಿ ಸಿದ್ಧಾಪುರ ಹೇಳಿದರು.
ಭಾರತ ರತ್ನ ಡಾ.ಬಿ.ಸಿ.ರಾಯ್ ಜನ್ಮ ದಿನಾಚರಣೆ ‘ವೈದ್ಯರ ದಿನ’ದ ಪ್ರಯುಕ್ತ ಶನಿವಾರ ನಿಟ್ಟೆ ವಿಶ್ವವಿದ್ಯಾಲಯದ ಕ್ಷೇಮ ವತಿಯಿಂದ ಕೆ.ಎಸ್.ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆಕಾಶದಲ್ಲಿ ಹಾರಲು, ನೀರಿನಲ್ಲಿ ಈಜಾಡಲು ಕಲಿತಿರುವ ನಾವು ಭೂಮಿ ಮೇಲೆ ಯಾವ ರೀತಿ ಬದುಕಬೇಕು ಎನ್ನುವುದನ್ನೂ ಇನ್ನೂ ಕಲಿಯದಿರುವುದು ದುರದೃಷ್ಟ ಎಂದು ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರ ಕ್ಲಿನಿಕ್‌ಗಳ ಮುಂದೆ ರೋಗಿಗಳು ಸರತಿ ಸಾಲಿನಲ್ಲಿ ನಿಲ್ಲುತ್ತಾರೆಂದರೆ ಅದು ವೈದ್ಯರು ರೋಗಿಗಳಿಗೆ ನೀಡುತ್ತಿರುವ ಪ್ರಾಮಾಣಿಕ ಸೇವೆ ಹಾಗೂ ರೋಗಿ ವೈದ್ಯರ ಜೊತೆಗೆ ಇಟ್ಟುಕೊಂಡಿರುವ ಅವಿನಾಭಾವ ಸಂಬಂಧದ ಕುರುಹು ಆಗಿದೆ. ನಾವು ಮಾಡುವ ಪ್ರಾಮಾಣಿಕ ಸೇವೆಯನ್ನು ಮೆಚ್ಚಿನ ರೋಗಿಗಳು ನಮ್ಮ ಬಳಿ ಬಂದರೆ ಹಣವೂ ತನ್ನಿಂತಾನೇ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಎಂ.ಪಿ.ಶೆಟ್ಟಿ, ಡಾ.ಬಿ.ವಸಂತ ಬಾಳಿಗಾ ಬಂಟ್ವಾಳ ಹಾಗೂ ಡಾ.ಹರಿದಾಸ್ ವೆರ್‌ಕೋಟ್ ನೀಲೇಶ್ವರ ಅವರನ್ನು ಸನ್ಮಾನಿಸಲಾಯಿತು. ಡಾ.ವಿಕ್ರಮ್ ಶೆಟ್ಟಿ, ಡಾ.ರಾಜೀವ್ ಹಾಗೂ ಡಾ.ತನ್ಮಯ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಕ್ಷೇಮ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಕ್ಷೇಮ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹಿರೇಮಠ ವಂದಿಸಿದರು. ಡಾ.ಸಿದ್ಧಾರ್ಥ್ ಕಾರ್ಯಕ್ರಮ ನಿರೂಪಿಸಿದರು.