ಕರ್ಣಾಟಕ ಬ್ಯಾಂಕ್ ತರಬೇತಿ ಕಾಲೇಜಿಗೆ ಐಎಸ್‌ಒ 9001:2015 ಪ್ರಮಾಣ ಪತ್ರ
ಮಂಗಳೂರು, ಜು.1: ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ತರಬೇತಿ ಕಾಲೇಜಿಗೆ ‘ಐಎಸ್‌ಒ 9001:2015’ ಪ್ರಮಾಣ ಪತ್ರ ಲಭಿಸಿದೆ. ಯುಎಸ್‌ಎಯ ಅಂತಾರಾಷ್ಟ್ರೀಯ ಮಟ್ಟದ ದೃಢೀಕರಣ ವೇದಿಕೆಯ ಸಹಯೋಗ ಹೊಂದಿರುವ ತಿರುಚಿಯ ಟಿವಿಇ ಸಂಸ್ಥೆ ಈ ಪ್ರಮಾಣ ಪತ್ರವನ್ನು ದೃಢೀಕರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಮಾತನಾಡುತ್ತಾ ‘‘ಬ್ಯಾಂಕಿಂಗ್ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಮತ್ತು ನುರಿತ ಕಾರ್ಯ ತಂಡ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಭೂತ ಸೌಕರ್ಯವನ್ನು ಹೊಂದಿರುವುದರಿಂದ ಐಎಸ್‌ಒ 9001:2015 ಪ್ರಮಾಣ ಪತ್ರ ಗಳಿಸಲು ಸಾಧ್ಯವಾಗಿದೆ. ದೇಶದ ಕೆಲವೇ ಬ್ಯಾಂಕ್‌ಗಳ ಪೈಕಿ ಗುಣಮಟ್ಟದ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಸಂಸ್ಥೆಯಾಗಿ ಕರ್ಣಾಟಕ ಬ್ಯಾಂಕ್ ಈ ಪ್ರತಿಷ್ಠಿತ ಪ್ರಮಾಣ ಪತ್ರವನ್ನು ಗಳಿಸಿದೆ. ಮುಂದೆಯೂ ಬ್ಯಾಂಕ್ ಈ ನಿಟ್ಟಿನಲ್ಲಿ ಬದ್ಧತೆಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದೆ ’’ಎಂದರು.
ಮೂರು ವರ್ಷದ ಅವಧಿಗೆ ಈ ಪ್ರಮಾಣ ಪತ್ರವನ್ನು ಪಡೆದಿದೆ. ಬ್ಯಾಂಕ್ ಸಿಬ್ಬಂದಿಯ ತರಬೇತಿ, ನಿಯಮಾವಳಿ, ಮೂಲಭೂತ ಸೌಕರ್ಯ ಸೇರಿದಂತೆ ಬ್ಯಾಂಕಿನ ತರಬೇತಿ ಕಾಲೇಜಿನ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಮಾಣ ಪತ್ರ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.