×
Ad

ಟ್ರಂಪ್‌ರ ಮಾನಸಿಕ ಆರೋಗ್ಯ ಪ್ರಶ್ನಿಸಿದ ಟಿವಿ ನಿರೂಪಕರು

Update: 2017-07-01 20:15 IST

ವಾಶಿಂಗ್ಟನ್, ಜು. 1: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಾಗ್ದಾಳಿಗೆ ಸಿಲುಕಿದ ಇಬ್ಬರು ಟೆಲಿವಿಶನ್ ನಿರೂಪಕರು ಶುಕ್ರವಾರ ಅಧ್ಯಕ್ಷರ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನಿಸಿದ್ದಾರೆ ಹಾಗೂ ಪೂರಕವಲ್ಲದ ಸುದ್ದಿ ವಿಮರ್ಶೆಯ ಹಿನ್ನೆಲೆಯಲ್ಲಿ ತಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಂಎಸ್‌ಎನ್‌ಬಿಸಿ ಚಾನೆಲ್‌ನ ‘ಮಾರ್ನಿಂಗ್ ಜೋ’ ಕಾರ್ಯಕ್ರಮದ ಸಹ ನಿರೂಪಕಿ ಮಿಕಾ ಬ್ರೆಝಿನ್‌ಸ್ಕಿ ಮೇಲೆ ನಡೆಸಿದ ವಾಗ್ದಾಳಿಗಾಗಿ ಗುರುವಾರ ಟ್ರಂಪ್ ಭಾರೀ ಟೀಕೆಯನ್ನು ಎದುರಿಸಿದರು.

‘‘ಕಳಪೆ ಬುದ್ಧಿಮತ್ತೆಯ ಹುಚ್ಚಿ ಮಿಕಾ’’ ಎಂಬುದಾಗಿ ಟ್ರಂಪ್ ಮಿಕಾರನ್ನು ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ. ಅದೂ ಅಲ್ಲದೆ, ‘‘ಹೊಸ ವರ್ಷದ ಮುನ್ನಾ ದಿನ ನನ್ನ ಮಾರ್-ಅ-ಲಾಗೊ ಎಸ್ಟೇಟ್‌ಗೆ ಆಕೆ ಬಂದಾಗ ಆಕೆಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮುಖದಿಂದ ಭಾರೀ ರಕ್ತಸ್ರಾವವಾಗುತ್ತಿತ್ತು’’ ಎಂದೂ ಹೇಳಿದ್ದಾರೆ.

‘ಮಾರ್ನಿಂಗ್ ಜೋ’ ಕಾರ್ಯಕ್ರಮದ ನಿರೂಪಕ ಜೋ ಸ್ಕಾರ್‌ಬೋರೊ ಮತ್ತು ಸಹ ನಿರೂಪಕಿ ಮಿಕಾ ಈಗ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ.

 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಈ ಇಬ್ಬರು ಟಿವಿ ನಿರ್ವಾಹಕರು ಟ್ರಂಪ್ ಜೊತೆ ಸ್ನೇಹ ಹೊಂದಿದ್ದರು. ಆದರೆ, ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಟ್ರಂಪ್‌ರನ್ನು ಟೀಕಿಸಲು ಆರಂಭಿಸಿದರು.

‘ದ ವಾಶಿಂಗ್ಟನ್ ಪೋಸ್ಟ್’ನಲ್ಲಿ ಶುಕ್ರವಾರ ಬರೆದ ಲೇಖನವೊಂದರಲ್ಲಿ ಅವರು, ಟ್ರಂಪ್‌ರ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘‘ನಿಮ್ಮ ಬಗ್ಗೆ ‘ನ್ಯಾಶನಲ್ ಎನ್‌ಕ್ವಯರರ್’ನಲ್ಲಿ ನಕಾರಾತ್ಮಕ ಲೇಖನವೊಂದು ಪ್ರಕಟವಾಗಲಿದೆ ಎಂಬುದಾಗಿ ಶ್ವೇತಭವನದ ಸಿಬ್ಬಂದಿ ನಮ್ಮನ್ನು ಎಚ್ಚರಿಸಿದರು. ಲೇಖನ ಪ್ರಕಟಿಸದಂತೆ ನೀವು ಟ್ರಂಪ್‌ರನ್ನು ಬೇಡಿಕೊಂಡರೆ ಅದು ಪ್ರಕಟವಾಗದು ಎಂದು ಅವರು ಹೇಳಿದರು’’ ಎಂದು ‘ಎಂಎಸ್‌ಎನ್‌ಬಿಸಿ’ ನಿರೂಪಕರು ಲೇಖನದಲ್ಲಿ ಬರೆದಿದ್ದಾರೆ.

 ಶುಕ್ರವಾರದ ‘ಮಾರ್ನಿಂಗ್ ಜೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಕಾರ್‌ಬೋರೊ, ಶ್ವೇತಭವನದ ಮೂವರು ಉನ್ನತ ಅಧಿಕಾರಿಗಳು ನನಗೆ ಕರೆ ಮಾಡಿ, ‘‘ನೀವು ಟ್ರಂಪ್‌ಗೆ ಕರೆ ಮಾಡಿ ಅವರ ಆಡಳಿತದ ಬಗ್ಗೆ ಮಾಡಿರುವ ವರದಿಗಳಿಗಾಗಿ ಕ್ಷಮೆ ಕೋರಿ’’ ಎಂದು ಸೂಚಿಸಿದರು ಎಂದರು. ನೀವು ಕರೆ ಮಾಡಿ ಕ್ಷಮೆ ಕೋರಿದರೆ, ಈ ಲೇಖನವನ್ನು ಟ್ರಂಪ್ ಕೈಬಿಡುತ್ತಾರೆ ಎಂದು ಅವರು ಹೇಳಿದರು ಎಂದು ಸ್ಕಾರ್‌ಬೋರೊ ತಿಳಿಸಿದರು.

ದಯವಿಟ್ಟು ಕರೆ ಮಾಡಿ ಜೋ...

‘‘ಶ್ವೇತಭವನದಿಂದ ಕರೆಗಳು ನಿರಂತರವಾಗಿ ಬರುತ್ತಿದ್ದವು... ಕರೆ ಮಾಡಿದವರು, ‘ಕರೆ ಮಾಡಿ, ನೀವು ಕರೆ ಮಾಡಲೇ ಬೇಕು, ದಯವಿಟ್ಟು ಕರೆ ಮಾಡಿ, ಫೋನ್ ಎತ್ತಿಕೊಳ್ಳಿ ಹಾಗೂ ಕರೆ ಮಾಡಿ’ ಎಂದು ಹೇಳುತ್ತಿದ್ದರು’’ ಎಂದು ಜೋ ಸ್ಕಾರ್‌ಬೋರೊ ತನ್ನ ‘ಮಾರ್ನಿಂಗ್ ಜೋ’ ಕಾರ್ಯಕ್ರಮದಲಿ ಶುಕ್ರವಾರ ಹೇಳಿದರು.

‘‘ಅದು ವಸ್ತುಶಃ ಬ್ಲಾಕ್‌ಮೇಲ್ ಆಗಿತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News