×
Ad

ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ಸಿಗಲಿ: ಹರೀಶ್ ಅದೂರು

Update: 2017-07-01 20:54 IST

ಉಡುಪಿ, ಜು.1: ಕಳೆದೆರಡು ದಶಕಗಳಿಂದ ಪತ್ರಿಕಾ ಮಾಧ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಪತ್ರಿಕೋದ್ಯಮ ಕಲಿತು ಪತ್ರಿಕಾರಂಗ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ವಿವಿಗಳ ಪಠ್ಯಗಳಲ್ಲಿ ಪ್ರಾಯೋಗಿಕತೆಗೆ ಹೆಚ್ಚಿನ ಒತ್ತು ಸಿಗುತ್ತಿಲ್ಲ. ಇದು ಬದಲಾಗಬೇಕಾಗಿದೆ. ವಿವಿ ಪಠ್ಯಗಳಲ್ಲಿ ಪ್ರಾಯೋಗಿಕತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹಿರಿಯ ಪತ್ರಕರ್ತ ಹರೀಶ್ ಕೆ. ಅದೂರು ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ, ಸಮ್ಮಾನ, ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿ ಪತ್ರಿಕೆಗಳು ಮನೆ-ಮನಗಳನ್ನು ಬೆಸೆದುಕೊಂಡಿರುವ ಕಾರಣ ಅವುಗಳು ಅವನತಿಯಾಗೊಲ್ಲ. ಆದರೆ ಈಗಿನ ಕಾಲಕ್ಕೆ ತಕ್ಕಂತೆ ಪತ್ರಿಕೋದ್ಯಮ ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬೇಕಾಗಿದೆ ಎಂದರು. ಇತ್ತೀಚೆಗೆ ಭಾಷೆಯ ಬಳಕೆಯಲ್ಲಿ ಸಾಕಷ್ಟು ಎಡವಟ್ಟುಗಳು ಪತ್ರಿಕೆಗಳಲ್ಲಿ ಕಂಡುಬರುತ್ತಿದೆ. ಈ ಬಗ್ಗೆ ಜಾಗೃತರಾಗಬೇಕಾದ ಅಗತ್ಯವಿದೆ ಎಂದು ಹರೀಶ್ ಹೇಳಿದರು.

 ಸನ್ಮಾನ, ಪುರಸ್ಕಾರ: ಕಾರ್ಯಕ್ರಮದಲ್ಲಿ ಸಾಧಕರಾದ ಪತ್ರಿಕಾ ವಿತರಕ ಹರೀಶ್ ಭಟ್ ಬೈಲೂರು, ಪತ್ರಕರ್ತ ಜಾನ್ ಡಿಸೋಜಾ ಕುಂದಾಪುರ, ಪ್ರಶಸ್ತಿ ಪುರಸ್ಕೃತ ಬಾಲನಟ ಅನೀಶ್ ಪ್ರಸಾದ್ ಪಾಂಡೇಲು ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಆಕಾಶ್ ಜಿ.ಎಸ್. ಕುಮಾರ್, ಇಂಚರಾ ಗುಂಡಿಬೈಲು, ರಮ್ಯಾ ಕಾಮತ್ ಮತ್ತು ಮನ್ವಿತ್ ಸುವರ್ಣ ಇವರನ್ನು ಗೌರವಿಸಲಾಯಿತು. ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಶೆಟ್ಟಿ ಅವರಿಗೆ ಸ್ಕಾಲರ್‌ಶಿಪ್ ವಿತರಣೆ ಮಾಡಲಾಯಿತು. ಪತ್ರಿಕೋದ್ಯಮ ಮುಗಿಸಿದ ವಿದ್ಯಾರ್ಥಿನಿ ಪ್ರೇಮಾ ಅವರು ಅನುಭವ ಹಂಚಿಕೊಂಡರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‌ಕ್ಲಬ್ ಸಂಚಾಲಕ ಚೇತನ್ ಪಡುಬಿದ್ರಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು ಸ್ವಾಗತಿಸಿದರು. ಪಲ್ಲವಿ ಸಂತೋಷ್ ಕಾರ್ಯಕ್ರಮ ನಿರೂಪಿಸಿ ಕೋಶಾಧಿಕಾರಿ ರಾಜೇಶ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News