ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ
ಮಂಗಳೂರು, ಜು. 1: ನಗರದ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾ ದಿನದ ಆಚರಣೆ ನಡೆಯಿತು.
ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಕಾರ್ಯಕ್ರಮ ಉದ್ಘಾಟಿಸಿ, ಪತ್ರಕರ್ತನಾದವನಿಗೆ ಸವಾಲುಗಳು ಸಹಜ. ಆದರೆ ತನ್ನಲ್ಲಿ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡು ಆ ಸವಾಲಿಗೆ ಸರಿಸಮಾನನಾಗಿ ಬೆಳೆಯುವ ಶಕ್ತಿಯನ್ನು ಆತ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯ ವಿಷಯದಲ್ಲಿ ಇಂದಿಗೂ ಸಮಾಜ ಮಾಧ್ಯಮಗಳಿಂದ ಭಾರೀ ನಿರೀಕ್ಷೆಯನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಸಾಜಕ್ಕೆ ಶಕ್ತಿಯಾಗಿರಬೇಕು ಎಂದರು.
ಪತ್ರಕರ್ತ ಕೇವಲ ವರದಿಗಾರನಾಗಬಾರದು, ಅವನು ಹೋರಾಟಗಾರ, ಚಳುವಳಿಗಾರ, ರಾಜಕಾರಣಿ, ಸಂಶೋಧಕನಾಗಿದ್ದಾಗ ಅವನಿಂದ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿದೆ. ವರದಿಗಾರ ವರದಿಯಾಚೆಗೂ ದೃಷ್ಟಿಯಿರಿಸಿ ವಿಮರ್ಶಿಸಿದಾಗ ಹೆಚ್ಚು ಪ್ರಬುದ್ಧನಾಗಲು ಸಾಧ್ಯ ಎಂದವರ ಉಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ‘ಮಾಧ್ಯಮ-ಹೊಸ ಆಯಾಮಗಳು’ ಎಂಬ ವಿಷಯದಲ್ಲಿ ಮಾತನಾಡಿ, ಫೇಸ್‌ಬುಕ್, ವಾಟ್ಸಪ್, ಟ್ವಿಟರ್‌ನಂತಹ ನವಮಾಧ್ಯಮಗಳಿಗೆ ಉಳಿದ ಮಾಧ್ಯಮಗಳು ಶರಣಾಗಿರುವುದು ಆಘಾತಕಾರಿ ಬೆಳವಣಿಗೆ ಎಂದರು.
ಮುಖ್ಯ ಅತಿಥಿಯಾಗಿ ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ, ಸಾಹಿತ್ಯ ಜ್ಞಾನವಿದ್ದವ ಪತ್ರಿಕೋದ್ಯಮದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ವಹಿಸಿದ್ದರು. ಶ್ರೀನಿವಾಸ್ ಇಂದಾಜೆ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.
ಕಪ್ಪುಪಟ್ಟಿಧರಿಸಿ ಪ್ರತಿಭಟನೆ
ರಾಜ್ಯದ ಇಬ್ಬರು ಪತ್ರಕರ್ತರಿಗೆ ವಿಧಾನಸಭೆ ಹಕ್ಕು ಬಾಧ್ಯತಾ ಸಮಿತಿ ಜೈಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಶನಿವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರು ಕಪ್ಪು ಪಟ್ಟಿಧರಿಸಿ ಸಾಂಕೇತಿಕವಾಗಿ ವಿರೋಧ ವ್ಯಕ್ತಪಡಿಸಿದರು.
ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಸದಾಶಿವ ಶೆಣೈ ಅವರನ್ನು ಪತ್ರಕರ್ತರ ಸಂಘದಿಂದ ಅಭಿನಂದಿಸಲಾಯಿತು. ಪತ್ರಕರ್ತ ಪುಷ್ಪರಾಜ್ ವಂದಿಸಿದರು.