×
Ad

ಮತ್ತಾವು ಪೊಲೀಸ್ ಜೀಪ್ ಸ್ಫೋಟ ಪ್ರಕರಣ: ಮೂವರು ಶಂಕಿತ ನಕ್ಸಲರ ಖುಲಾಸೆ

Update: 2017-07-01 21:36 IST

ಉಡುಪಿ, ಜು.1: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮತ್ತಾವು ಕ್ರಾಸ್ ಬಳಿ 2005ರ ಜು.28ರಂದು ಸಂಜೆ ನೆಲಬಾಂಬ್ ಸ್ಫೋಟಿಸಿ ಪೊಲೀಸ್ ಜೀಪ್ ಗಳಿಗೆ ಹಾನಿ ಹಾಗೂ 14 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ 10 ಮಂದಿ ಶಂಕಿತ ನಕ್ಸಲರಲ್ಲಿ ನೀಲಗುಳಿ ಪದ್ಮನಾಭ, ದೇವೇಂದ್ರ ಹಾಗೂ ನಂದಕುಮಾರ್ ಇವರನ್ನು ಉಡುಪಿಯ ನ್ಯಾಯಾಲಯ ಇಂದು ದೋಷಮುಕ್ತಗೊಳಿಸಿದೆ.

ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾಗಿರುವ ಪ್ರಮುಖ ನಕ್ಸಲ್ ನಾಯಕರಾದ ಬಿ.ಜಿ.ಕೃಷ್ಣಮೂರ್ತಿ, ವಿಕ್ರಮ ಗೌಡ ಯಾನೆ ಶ್ರೀಕಾಂತ್, ಸುರೇಶ್ ಯಾನೆ ಮಹೇಶ್, ಪ್ರಭಾ ಯಾನೆ ಹೊಸಗದ್ದೆ ಪ್ರಭಾ, ವಸಂತ ಯಾನೆ ಆನಂದ, ಸಾವಿತ್ರಿ ಯಾನೆ ಉಷಾ ಹಾಗೂ ಸುಂದರಿ ಯಾನೆ ಗೀತಾ ತಲೆಮರೆಸಿಕೊಂಡಿದ್ದಾರೆ.

ಮತ್ತಾವು ಪ್ರಕರಣದಲ್ಲಿ ಪೊಲೀಸರಿಂದ ಬಂಧಿತರಾಗಿರುವ ನೀಲಗುಳಿ ಪದ್ಮನಾಭ ಯಾನೆ ಪದ್ದಣ್ಣ, ದೇವೇಂದ್ರ ಯಾನೆ ವಿಷ್ಣು ಹಾಗೂ ಎನ್.ನಂದಕುಮಾರ್ ಯಾನೆ ರಂಗಪ್ಪ ಇಂದು ದೋಷಮುಕ್ತಗೊಂಡ ನಕ್ಸಲರಾಗಿದ್ದಾರೆ. ಆರು ತಿಂಗಳ ಹಿಂದೆ ಪೊಲೀಸರಿಗೆ ಶರಣಾಗಿರುವ ನೀಲಗುಳಿ ಪದ್ಮನಾಭ ಅವರ ಮೇಲೆ ಉಡುಪಿ, ಚಿಕ್ಕಮಗಳೂರು, ಕುಂದಾಪುರ ಸೇರಿದಂತೆ ಹಲವು ಠಾಣೆಗಳಲ್ಲಿ 5 ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿ ಇದ್ದು ಅವರ ಜೈಲುವಾಸ ಮುಂದುವರಿಯಲಿದೆ.

ಆದರೆ ತನ್ನ ಮೇಲಿದ್ದ 25ಕ್ಕೂ ಅಧಿಕ ಮೊಕದ್ದಮೆಗಳಿಂದ ದೋಷಮುಕ್ತ ಗೊಂಡಿರುವ ದೇವೇಂದ್ರ ಹಾಗೂ ನಂದಕುಮಾರ್ ಅವರು ನಾಳೆ ಮೈಸೂರು ಜೈಲಿನಿಂದ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ದೇವೇಂದ್ರ ಅವರ ಮೇಲೆ ಈದು ಪ್ರಕರಣದ ವಿಚಾರಣೆ ಬಾಕಿ ಉಳಿದಿದ್ದರೂ, ಇದರಲ್ಲಿ ಅವರಿಗೆ ಜಾಮೀನು ದೊರಕಿರುವುದರಿಂದ ಅವರ ಬಿಡುಗಡೆಗೆ ಹಾದಿ ಸುಗಮಗೊಂಡಿದೆ.

ದೇವೇಂದ್ರ ಮತ್ತು ನಂದಕುಮಾರ್ ಅವರನ್ನು ಪೊಲೀಸರು 2009ರಲ್ಲೇ ಬಂಧಿಸಿದ್ದರು. ಉಡುಪಿಯಲ್ಲಿ ಅವರ ಮೇಲಿದ್ದ ಎಲ್ಲಾ ಏಳು ಕೇಸುಗಳಲ್ಲಿ ಅವರು ದೋಷಮುಕ್ತಗೊಂಡಿದ್ದಾರೆ. ನಂದಕುಮಾರ್ ವಿರುದ್ಧವಿದ್ದ ಎಲ್ಲಾ ಕೇಸುಗಳು ಬಿದ್ದುಹೋಗಿದ್ದು, ದೇವೇಂದ್ರ ಮೇಲೆ ಈದು ಕೇಸು ಇದೆ. ನಾಳೆ ಇವರಿಬ್ಬರು ಮೈಸೂರಿನಲ್ಲಿ ಬಿಡುಗಡೆಗೊಳ್ಳಲಿದ್ದಾರೆ.

ಕಾರ್ಕಳದ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ರಾಮಚಂದ್ರ ನಾಯ್ಕೆ ಮತ್ತವರ ಸಿಬ್ಬಂದಿ 2005ರ ಜು.28ರಂದು ಸಂಜೆ ವೇಳೆಗೆ ನಕ್ಸಲ್ ಕೂಬಿಂಗ್‌ಗೆಂದು ಜೀಪಿನಲ್ಲಿ ಕೊಂಕಣರಬೆಟ್ಟಿನಿಂದ ಮುಟ್ಲಪಾಡಿ ಕಡೆ ತೆರಳುತ್ತಿದ್ದಾಗ ಮತ್ತಾವು ಕ್ರಾಸ್ ಬಳಿ ಮಾವೋವಾದಿ ಗುಂಪಿನಲ್ಲಿ ಸಕ್ರಿಯರಾಗಿದ್ದ ಆರೋಪಿಗಳು ಇರಿಸಿದ್ದ ನೆಲಬಾಂಬ್ ಸ್ಫೋಟಿಸಿ ರಾಮಚಂದ್ರ ನಾಯ್ಕೆ ಹಾಗೂ 14 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಎರಡು ಜೀಪುಗಳು ನೆಲಬಾಂಬ್ ಸ್ಫೋಟಕ್ಕೆ ಹಾನಿಗೊಂಡಿದ್ದವು. ಅಲ್ಲದೇ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಕಾಡಿನಲ್ಲಿ ಕಣ್ಮರೆಯಾಗಿದ್ದರೆಂದು ಆರೋಪಿಸಲಾಗಿತ್ತು.

ನಕ್ಸಲ್ ಆರೋಪಿಗಳು ಪೊಲೀಸರನ್ನು ಕೊಲ್ಲಲು ಪ್ರಯತ್ನಿಸಿದ, ರಾಜ್ಯ ಸರಕಾರದ ವಿರುದ್ಧ ಯುದ್ಧದ ಸಂಚು ಹೂಡಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪವನ್ನು ಹೊರಿಸಲಾಗಿತ್ತು. ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಶಾಂತರಾಮ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News