ಗೋರಕ್ಷಕರಿಂದ ಅಮಾಯಕರ ಹತ್ಯೆಗೆ ಕಡಿವಾಣ ಹಾಕಿ: ಕೇಂದ್ರ ಸರಕಾರಕ್ಕೆ ಮೀರಾ ಕುಮಾರ್ ಮನವಿ

Update: 2017-07-01 16:20 GMT

ಮುಂಬೈ, ಜು. 1: ಗೋರಕ್ಷಕರಿಂದ ಅಮಾಯಕರ ಮೇಲೆ ದಾಳಿ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿ ಮೀರಾ ಕುಮಾರ್, ದೇಶದಲ್ಲಿ ಸಾಮರಸ್ಯದ ವಾತಾವರಣ ಕಲುಷಿತಗೊಳ್ಳುತ್ತಿದೆ. ಇಂತಹ ಹತ್ಯೆ ತಡೆಯಲು ಕೇಂದ್ರ ಸರಕಾರ ದೃಢ ಹೆಜ್ಜೆ ಇರಿಸಬೇಕು ಎಂದಿದ್ದಾರೆ.

ನಾನು ಬೆಳಗ್ಗೆ ದಿನಪತ್ರಿಕೆ ತೆರೆದು ಓದಿದಾಗ 16 ವರ್ಷದ ಬಾಲಕನನ್ನು ರೈಲಿನಲ್ಲಿ ಥಳಿಸಿ ಹತ್ಯೆ ನಡೆಸಿರುವ ಸುದ್ದಿ ಓದಿ ಭೀತಳಾದೆ ಎಂದು ಅವರು ಹೇಳಿದ್ದಾರೆ. ಹಿಂಸಾಚಾರದ ಘಟನೆಗಳು ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರ ದೃಢ ಹೆಜ್ಜೆ ಇರಿಸಬೇಕು. ಎನ್‌ಡಿಎ ಸಂತತ್ತಿನಲ್ಲಿ ಅಭೂತಪೂರ್ವ ಜನಾದೇಶ ಪಡೆದುಕೊಂಡಿದೆ. ಆದುದರಿಂದ ಎನ್‌ಡಿಎ ನೇತೃತ್ವದ ಸರಕಾರ ಗೋರಕ್ಷಕರಿಂದ ಅಮಾಯಕರ ಹತ್ಯೆಯನ್ನು ತಡೆಯಬೇಕು ಎಂದು ಅವರು ಹೇಳಿದ್ದಾರೆ.

ಗೋರಕ್ಷಣೆ ಹೆಸರಲ್ಲಿ ಜನರ ಹತ್ಯೆ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

 ಸಂಕುಚಿತ ಮನೋಭಾವನೆ ಹಾಗೂ ಧಾರ್ಮಿಕ ಅಸಹಿಷ್ಣುತೆಯಿಂದ ಪ್ರಸ್ತುತ ದೇಶ ಸಂದಿಗ್ದ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News