×
Ad

ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡಲು ಪ್ರಯತ್ನಿಸಿ: ಪ್ರಕಾಶ್ ಬಾರೆ

Update: 2017-07-01 22:11 IST

ನಿಟ್ಟೆ,ಜು.1: ಪದವಿ ಪಡೆದು ಹೊರಬರುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಾಜಕ್ಕೆ ಏನನ್ನಾದರೂ ಉಪಯುಕ್ತ ಕೊಡುಗೆ ನೀಡುವ ಪ್ರಯತ್ನ ಪಡುವ ಮೂಲಕ ತಮ್ಮ ಬದುಕಿಗೊಂದು ಅರ್ಥಕಂಡು ಕೊಳ್ಳುವಂತೆ ಖ್ಯಾತ ಉದ್ಯಮಿ, ಚಲನಚಿತ್ರ, ರಂಗಭೂಮಿ ನಟ, ನಿರ್ಮಾಪಕ ಪ್ರಕಾಶ್ ಬಾರೆ ಹೇಳಿದ್ದಾರೆ.

ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ 18ನೇ ಬ್ಯಾಚ್‌ನ ಎಂಬಿಎ ವಿದ್ಯಾರ್ಥಿಗಳಿಗೆ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.

ಜೀವನದಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಂಡು ಏನಾದರೂ ಉಪಯುಕ್ತವಾದ ಕೊಡುಗೆಯನ್ನು ಸಮಾಜಕ್ಕೆ ನೀಡಲು ಪ್ರಯತ್ನಿಸಿ. ವೈಭವೋಪೇತ ಜೀವನದತ್ತ ಹೆಚ್ಚು ಒಲವು ತೋರಿಸಬೇಡಿ. ವಿಶೇಷ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಸಮಾಜಕ್ಕೇನಾದರೂ ನೀಡಲು ಶ್ರಮಿಸಿ ಎಂದವರು ಹೇಳಿದರು.

ಇಂದಿನ ವಿದ್ಯಾರ್ಥಿಗಳು ಏನನ್ನಾದರೂ ಅತೀ ವೇಗವಾಗಿ ಕಲಿಯುತ್ತಾರೆ. ಇದಕ್ಕೆ ಇಂದಿನ ತಂತ್ರಜ್ಞಾನದ ಪ್ರಗತಿಯೂ ಅವರಿಗೆ ಪೂರಕವಾಗಿರುತ್ತದೆ. ಕಲಿಕೆ ಎಂಬುದು ಕೊನೆಯೇ ಇಲ್ಲದ ಒಂದು ಪ್ರಕ್ರಿಯೆ. ಇಂದಿನ ತಲೆಮಾರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದು, ಯಾವುದೇ ಸವಾಲನ್ನು ದಿಟ್ಟ ಎದುರಿಸಲು ಸಮರ್ಥವಿದೆ ಎಂದರು.

ಪ್ರಸಕ್ತ ಶಿಕ್ಷಣ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಅಭಿಪ್ರಾಯ ಪಟ್ಟ ಪ್ರಕಾಶ್, ಬದುಕಿನ ಸವಾಲುಗಳನ್ನು ಎದುರಿಸಲು ಬೇಕಾದ ಕುಶಲತೆಗಳನ್ನು ಇವು ಕಲಿಸುತ್ತಿಲ್ಲ. ಬದಲಾವಣೆಗಳು ಊಹೆಗೂ ನಿಲುಕದ ವೇಗದಲ್ಲಿ ಕಂಡುಬರುತ್ತಿವಾಗ ಈ ಸವಾಲುಗಳನ್ನು ಎದುರಿಸಲು ಶಿಕ್ಷಣ ಅವರನ್ನು ಸಿದ್ಧಪಡಿಸುತ್ತಿಲ್ಲ ಎಂದರು.

ವಿದ್ಯಾರ್ಥಿಗಳು ತಮ್ಮ ಹೃದಯದ ಮಾತುಗಳನ್ನು ಕೇಳಬೇಕು. ವ್ಯಕ್ತಿಯೊಬ್ಬನ ವ್ಯಕ್ತ್ಝಿತ್ವವನ್ನು ಅಳೆಯಲು ಸಮಾಜ ತನ್ನದೇ ಆದ ಮಾನದಂಡವನ್ನು ಹೇರುತ್ತದೆ. ಅದರಲ್ಲಿ ಹಣಕ್ಕೆ ಅತೀ ಉನ್ನತ ಸ್ಥಾನವನ್ನು ನೀಡುತ್ತದೆ. ಆದರೆ ಹಣ, ಜೀವನದ ಎಲ್ಲಾ ಖುಷಿ, ನೆಮ್ಮದಿಯನ್ನು ಖರೀದಿಸುತ್ತದೆ ಎಂದು ನೀವು ತಿಳಿದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೊದಲು ನಿಮ್ಮ ಪ್ರತಿಷ್ಠೆಯನ್ನು ಸಾಯಿಸಿ. ಅದು ನಿಮ್ಮ ಯಶಸ್ಸಿನ ಮಾರ್ಗಕ್ಕೆ ಹಲವು ಅಡೆತಡೆಗಳನ್ನು ಒಡ್ಡುತ್ತದೆ. ಜೀವನದ ಅನುಭವದಿಂದ ನೀವು ಪಾಠ ಕಲಿಯುತ್ತಾ ಹೋಗಿ ಎಂದವರು ಹೇಳಿದರು.
ಮಾಧುರಿ ಕೆ. ಅವರು ಅತ್ಯುತ್ತಮ ವಿದ್ಯಾರ್ಥಿಗಿರುವ ಚಿನ್ನದ ಪದಕವನ್ನು ಪಡೆದರೆ, ಹೊರಹೋಗುವ ಅತ್ಯುತ್ತಮ ವಿದ್ಯಾರ್ಥಿಗಿರುವ ಚಿನ್ನದ ಪದಕವನ್ನು ಸುಧೀಂದ್ರ ಪ್ರಭು ಪಡೆದರು. ದೀಶಾ ಇವರ ಪ್ರೊಜೆಕ್ಟ್ ವರದಿ ಅತ್ಯುತ್ತಮ ಎಂದು ಘೋಷಿತವಾಗಿ 5,000ರೂ.ನಗದು ಬಹುಮಾನ ಪಡೆದರು.

ಸಂಸ್ಥೆಯ ಅಕಾಡೆಮಿಕ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಎನ್.ಕೆ.ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಡಾ.ಕೆ.ಸಂಕರನ್ ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಡಾ.ಸುಧೀರ್ ಎಂ. ಪದವಿ ವಿದ್ಯಾರ್ಥಿಗಳ ಪಟ್ಟಿ ಓದಿದರು. ಡಾ.ರಾಧಾಕೃಷ್ಮ ಶರ್ಮ ಅವರು ವಂದಿಸಿದರೆ, ಡಾ.ಸುಧೀರ್‌ರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News