ಪೇಜಾವರ ಸ್ವಾಮೀಜಿ ಕ್ಷಮೆ ಯಾಚಿಸಲು ಆಗ್ರಹಿಸಿ ಮಂಗಳೂರಿನಲ್ಲಿ ಧರಣಿ
ಮಂಗಳೂರು, ಜು.2: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಮಠದ ಪಾವಿತ್ರಕ್ಕೆ ಧಕ್ಕೆ ತಂದಿದ್ದಾೆ. ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಪೇಜಾವರ ಸ್ವಾಮೀಜಿ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ, ಅಖಿಲ ಭಾರತ ಹಿಂದೂ ಮಹಾಸಭೆ, ಹಿಂದೂ ಜನಜಾಗೃತಿ ಸಮಿತಿಯು ರವಿವಾರ ನಗರದ ಲಾಲ್‌ಬಾಗ್ ಸರ್ಕಲ್‌ನಲ್ಲಿ ಧರಣಿ ನಡೆಸಿತು.
ಗೋರಕ್ಷಕರಿಗೆ ತಿರಸ್ಕಾರ, ಗೋ ಭಕ್ಷಕರಿಗೆ ಸತ್ಕಾರ, ಶ್ರೀ ಕೃಷ್ಣ ಮಠದಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದು ಹಿಂದೂಗಳಿಗೆ ಮಾಡಿದ ಅವಮಾನ, ಮೂರ್ತಿಪೂಜಕರನ್ನು ವಿರೋಧಿಸುವ ಮುಸ್ಲಿಮರಿಗೆ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಲಾಗಿದೆ. ''ಸ್ವಾಮೀಜಿಯವರೇ ಹಿಂದೂ ಧರ್ಮದ ಭಕ್ತಿಯ ಮೇಲೆ ಆಘಾತ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸಿ, ಮುಸಲ್ಮಾನರ ಓಲೈಕೆ ನಿಲ್ಲಿಸಿ, ಗೋಮೂತ್ರದಿಂದ ಶ್ರೀಕೃಷ್ಣ ಮಠ ಶುದ್ಧಿ ಮಾಡಿ'' ಎಂದು ಧರಣಿ ನಿರತರು ಒತ್ತಾಯಿಸಿದರು.
ಹಿಂದೂ ಮಹಾಸಭಾ ರಾಜ್ಯ ವಕ್ತಾರ ರಾಜೇಂದ್ರ ಮಾತನಾಡಿ, ಪೇಜಾವರ ಸ್ವಾಮೀಜಿ ಮಠದಲ್ಲಿ ಇಫ್ತಾರ್ ಕೂಟಕ್ಕೆ ಅವಕಾಶ ನೀಡಬಾರದಿತ್ತು. ಶ್ರೀಮಠ ಭಕ್ತರ ಸೊತ್ತು. ರಾಜಕೀಯ ಪಕ್ಷಗಳ ಷಡ್ಯಂತರಕ್ಕೆ ಸ್ವಾಮೀಜಿ ಬಲಿಯಾಗಿದ್ದಾರೆ. ಶ್ರೀಮಠಕ್ಕೆ ಜಾಗವನ್ನು ಮುಸ್ಲಿಮರು ದಾನ ಮಾಡಿದ್ದಾರೆ ಎಂಬುದು ಸುಳ್ಳು. ಅಖಂಡ ಭಾರತದ ಸಂಕಲ್ಪದ ಬಗ್ಗೆ ಮಾತನಾಡುವ ಸ್ವಾಮೀಜಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಆದ್ದರಿಂದ ಪೇಜಾವರ ಸ್ವಾಮೀಜಿ ಭೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಪೀಠತ್ಯಾಗ ಮಾಡಬೇಕು ಎಂದರು.
ಶ್ರೀರಾಮಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಾತನಾಡಿ, ಕೃಷ್ಣ ಮಠದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ನೀಡಿದ್ದು ಸರಿಯಲ್ಲ. ಹಿಂದೂ ಸಮಾಜದ ಉನ್ನತಿಗಾಗಿ ಮಾರ್ಗರ್ಶನ ಮಾಡಿದ ನೀವೇ ಈ ರೀತಿ ನಡೆದುಕೊಂಡರೆ ಇನ್ನು ಹಿಂದೂ ಸಮಾಜ ಏನು ಮಾಡಬೇಕು. ಹಿಂದೆ ಮುಸ್ಲಿಮರನ್ನು ವಿರೋಧಿಸಿದ್ದ ನೀವು ಈಗ ಅವರನ್ನು ಪುರಸ್ಕರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ಚಂದ್ರಮೋಹನ ಮಾತನಾಡಿ, ಗೋಹತ್ಯೆ, ಮತಾಂತರ ಪ್ರಕರಣಗಳು ನಡೆಯುತ್ತಿರಬೇಕಾದರೆ, ಇಫ್ತಾರ್‌ಕೂಟ ಆಯೋಜಿಸಿ ಸೌಹಾರ್ಧ ಮೆರೆಯುವ ಅಗತ್ಯ ಏನಿದೆ? ಮಠವನು ಶುದ್ಧೀಕರಣಗೊಳಿಸಬೇಕು. ಇಲ್ಲದಿದ್ದರೆ ಮುಂದೆ ಉಡುಪಿಯ ಎಲ್ಲ ಮಠಗಳಲ್ಲೂ ನಮಾಝ್, ಪ್ರಾರ್ಥನೆ ಕೂಟಗಳು ನಡೆದರೆ ಅಚ್ಚರಿ ಇಲ್ಲ ಎಂದರು.
ಶಂಖನಾದ ಹಾಗೂ ಕೃಷ್ಣ ಸ್ಮರಣೆಯೊಂದಿಗೆ ಧರಣಿ ಆರಂಭಗೊಂಡಿತು. ಧರಣಿಗೂ ಮುನ್ನ ಶ್ವಾನದಳದಿಂದ ಪ್ರತಿಭಟನಾ ಸ್ಥಳದ ಸುತ್ತಮುತ್ತ ತಪಾಸಣೆ ನಡೆಸಲಾಯಿತು. ಪೊಲೀಸ್ ಬಂದೋಬಸ್ತ್ ಬಿಗುಗೊಳಿಸಲಾಗಿತ್ತು.
ಧರಣಿಯಲ್ಲಿ ಸಂಘಟನೆಗಳ ಮುಖಂಡರದ ಧರ್ಮೇಂದ್ರ, ರಾಜೇಶ್ ಪವಿತ್ರನ್ ಮತ್ತಿತರರು ಪಾಲ್ಗೊಂಡಿದ್ದರು.