×
Ad

ಅಶ್ರಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲು ಸೆರೆ: ಎಸ್ಪಿ

Update: 2017-07-02 15:53 IST

ಮಂಗಳೂರು, ಜು.2: ಬೆಂಜನಪದವಿನಲ್ಲಿ ಜೂನ್ 21ರಂದು ನಡೆದ ಎಸ್.ಡಿ.ಪಿ.ಐ. ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಬಜರಂಗದಳದ ಜಿಲ್ಲಾ ಮುಖಂಡ ಭರತ್ ಕುಮ್ಡೇಲುನನ್ನು ಬಂಧಿಸಿರುವುದಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಭರತ್‌ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.

ಅಶ್ರಫ್ ಹತ್ಯೆ ಪ್ರಕರಣದಲ್ಲಿ ಭರತ್ ಕುಮ್ಡೇಲು ಮತ್ತು ದಿವ್ಯರಾಜ್ ಶೆಟ್ಟಿ ಪ್ರಧಾನ ಆರೋಪಿಗಳೆಂದು ಐಜಿಪಿ ಹರಿಶೇಖರನ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಈ ಪೈಕಿ ದಿವ್ಯರಾಜ್ ಶೆಟ್ಟಿಯನ್ನು ಈಗಾಗಲೇ ಬಂಧಿಸಲಾಗಿದೆ.

ಪುದು ಗ್ರಾಮದ ಕುಮ್ಡೇಲು ನಿವಾಸಿ ಭರತ್ ಬಜರಂಗದಳದ ಜಿಲ್ಲಾ ಮುಖಂಡನಾಗಿದ್ದಾನೆ. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರೊಂದಿಗೆ ಗುರುತಿಕೊಂಡಿದ್ದ ಭರತ್ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಭಾಕರ್ ಭಟ್ ರೊಂದಿಗೆ ವೇದಿಕೆ ಹಂಚಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅಶ್ರಫ್ ಕೊಲೆ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವುದರಿಂದ ಕೊಲೆ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ರ ಪಾತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಮಾನಿ ವ್ಯಕ್ತವಾಗಿತ್ತು.

ಅಶ್ರಫ್ ಕೊಲೆಗೆ ಸಂಚು ರೂಪಿಸಲು ದುಷ್ಕರ್ಮಿಗಳ ತಂಡ ಒಂದು ತಿಂಗಳ ಹಿಂದೆ ಹಲವೆಡೆಗಳಲ್ಲಿ ಚರ್ಚಿಸಿ ಅಶ್ರಫ್‌ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಬಳಿಕ ಜೂ.21ರಂದು ಅಶ್ರಫ್ ಬೆಂಜನಪದವಿಗೆ ಬಂದಿರುವ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿಕೊಂಡು ತಲವಾರು ಸಹಿತ ಮಾರಕಾಸ್ತ್ರಗಳಿಂದ ಬೆಂಜನಪದವಿಗೆ ಆಗಮಿಸಿ ಅಶ್ರಫ್‌ರ ಮೇಲೆ ದಾಳಿ ನಡೆಸಿ ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ವಿಚಾರಣೆ ಸಂದರ್ಭ ಬಾಯ್ಬಿಟ್ಟಿರುವುದಾಗಿ ಐಜಿಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News