×
Ad

ಆ.15ರಿಂದ ಇಂದಿರಾ ಕ್ಯಾಂಟೀನ್ ಆರಂಭ

Update: 2017-07-02 16:07 IST

ಮಂಗಳೂರು, ಜು.2: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಆಗಸ್ಟ್ 15ರಿಂದ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದೆ ಎಂದು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ರವಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆಯಿಂದ ದಿನನಿತ್ಯ ಲಕ್ಷಾಂತರ ಕಾರ್ಮಿಕರು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು ಬೇರೆ ಬೇರೆ ಕಾರಣಕ್ಕೆ ಬಂದು ಹೋಗುತ್ತಿದ್ದಾರೆ. ಅಲ್ಲಿನ ಬಹುತೇಕ ಹೊಟೇಲ್‌ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಏರಿಕೆಯಿಂದ ಸಾಕಷ್ಟು ಮಂದಿ ಒಂದು ಹೊತ್ತಿನ ತಿಂಡಿ, ತಿನಿಸು ಮಾಡುವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು. ಅವರ ಕನಸಿನ ಯೋಜನೆಗೆ ಆ.15ರಂದು ಸ್ವತ: ಅವರು ಚಾಲನೆ ನೀಡಲಿದ್ದಾರೆ ಎಂದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದ ಐವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಮುಖ್ಯಮಂತ್ರಿ ರಚಿಸಿದ್ದಾರೆ. ಇದರಲ್ಲಿ ತಾನು ಕೂಡ ಒಬ್ಬ ಸದಸ್ಯನಾಗಿದ್ದೇನೆ. ಬಿಬಿಎಂಪಿ ಮೇಯರ್ ಹಾಗು ಇಬ್ಬರು ಅಧಿಕಾರಿಗಳು ಕೂಡ ಈ ಸಮಿತಿಯಲ್ಲಿದ್ದಾರೆ. ಕ್ಯಾಂಟೀನ್‌ ರೂಪುರೇಷಗಳ ಬಗ್ಗೆ ಈಗಾಗಲೇ ಸಮಿತಿ ಸಭೆ ಸೇರಿ ಚರ್ಚೆ ನಡೆಸಿದೆ. ಕಡಿಮೆ ಬೆಲೆಯಲ್ಲಿ ಆಹಾರವಲ್ಲದೆ, ಶುಚಿ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ. ಬೆಳಗ್ಗಿನ ತಿಂಡಿಗೆ 5 ರೂ., ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ 10 ರೂ. ನಿಗದಿಪಡಿಸಲಾಗಿದೆ. ಜಿಎಸ್‌ಟಿ ಸಹಿತ ಹೆಚ್ಚುವರಿ ಎಲ್ಲ ಖರ್ಚು ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ ಎಂದು ಖಾದರ್ ತಿಳಿಸಿದರು.

ಈಗಾಗಲೇ ಬೆಂಗಳೂರಿನ ಕೆಫ್ ಸಂಸ್ಥೆಗೆ ಇದರ ಗುತ್ತಿಗೆಯನ್ನು ವಹಿಸಲಾಗಿದೆ. ನೀರು, ಸ್ಥಳ, ವಿದ್ಯುತ್ ಎಲ್ಲವೂ ಉಚಿತವಾಗಿದ್ದು, ತುರ್ತು ಹಿನ್ನಲೆಯಲ್ಲಿ ಟೆಂಡರ್ ಇಲ್ಲದೆ ಗುತ್ತಿಗೆ ವಹಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನ ಸಭಾ ಕ್ಷೇತ್ರಗಳಿದೆ. ಪ್ರತೀ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲೊಂದು ಅಡುಗೆ ತಯಾರಿ ಕೇಂದ್ರ ನಿರ್ಮಿಸಲಾಗುತ್ತದೆ. ಅಲ್ಲಿ ಅಡುಗೆ ತಯಾರಿಸಿ 198 ಕ್ಯಾಂಟೀನ್‌ಗಳಿಗೆ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಖಾದರ್ ಹೇಳಿದರು.

ಪ್ರತೀ ದಿನ ಕನಿಷ್ಠ 1 ಕ್ಯಾಂಟೀನ್‌ನಲ್ಲಿ 900ರಿಂದ 1,000 ಮಂದಿಗೆ ಆಹಾರ ನೀಡುವ ಗುರಿ ಹೊಂದಲಾಗಿದೆ. ಅಂದರೆ ದಿನಂಪ್ರತಿ 198 ಕೇಂದ್ರದಲ್ಲಿ ಸುಮಾರು 1.80 ಲಕ್ಷ ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇದು ಯಶಸ್ವಿಯಾದರೆ ರಾಜ್ಯದ ಇತರ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News