×
Ad

ಉಜ್ವಲ ಯೋಜನೆಯಡಿ ಸ್ಟವ್ ವಿತರಣೆ; ಮುಖ್ಯಮಂತ್ರಿ ಜೊತೆ ಚರ್ಚೆ: ಸಚಿವ ಖಾದರ್

Update: 2017-07-02 16:10 IST

ಮಂಗಳೂರು, ಜು.2: ಕೇಂದ್ರ ಸರಕಾರವು ಉಜ್ವಲ ಯೋಜನೆಯಡಿ ಸ್ಟವ್ ವಿತರಿಸಲು ರಾಜ್ಯ ಸರಕಾರಕ್ಕೆ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಮುಖ್ಯಮಂತ್ರಿಯ ಜೊತೆ ಚರ್ಚೆ ನಡೆಸುವುದಾಗಿ ಸಚಿವ ಯು.ಟಿ.ಖಾದರ್ ಹೇಳಿದರು.

ರವಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಸರಕಾರವು ಉಜ್ವಲ ಯೋಜನೆಯಡಿ ಸಿಲಿಂಡರ್ ವಿತರಿಸಿದರೆ, ರಾಜ್ಯ ಸರಕಾರವು ಸ್ಟವ್ ವಿತರಿಸಲು ಮುಂದಾಗಿತ್ತು. ಆದರೆ, ಆವಾಗ ಒಪ್ಪಿಗೆ ನೀಡದಿದ್ದ ಕೇಂದ್ರ ಸರಕಾರವು ಇಂದು ಒಪ್ಪಿಗೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸ್ಟವ್ ವಿತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ರಾಜ್ಯ ಸರಕಾರವು ಅನಿಲ ಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಸಿಲಿಂಡರ್ ಮತ್ತು ಸ್ಟವ್ ವಿತರಿಸಲು ಮುಂದಾಗಿದೆ. ಅರ್ಹರು ಆಯಾ ಪಂಚಾಯತ್‌ಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು. ಸಾಫ್ಟ್‌ವೇರ್ ಅಳವಡಿಕೆಯೊಂದಿಗೆ ಶೀಘ್ರ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಖಾದರ್ ತಿಳಿಸಿದರು.

ಉಜ್ವಲ ಯೋಜನೆಗೆ ಸಂಬಂಧಿಸಿ 2011ರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕೈಗೊಳ್ಳಲಾಗಿತ್ತು. ಆ ಬಳಿಕ ಅದೆಷ್ಟೋ ಮಂದಿಯ ಆರ್ಥಿಕ ಸ್ಥಿತಿಗತಿಯಲ್ಲಿ ಏರಿಳಿತವಾಗಿರಬಹುದು. ಅದನ್ನೇ ಮುಂದಿಟ್ಟು ಉಜ್ವಲ ಯೋಜನೆ ಜಾರಿಗೊಳಿಸಿದರೆ ಸಾಕಷ್ಟು ಮಂದಿ ಇದರ ಪ್ರಯೋಜನದಿಂದ ವಂಚಿರಾಗುವ ಸಾಧ್ಯತೆ ಇದೆ ಎಂದು ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News