ಜಿಎಸ್‌ಟಿ ರಾಜಕೀಯ ಗಿಮಿಕ್: ಸಚಿವ ಖಾದರ್
ಮಂಗಳೂರು, ಜು.2: ಕೇಂದ್ರದ ಎನ್‌ಡಿಎ ಸರಕಾರ ಜಾರಿಗೊಳಿಸಿರುವ ಜಿಎಸ್‌ಟಿ ಒಂದು ರಾಜಕೀಯ ಗಿಮಿಕ್ ಎಂದು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ವ್ಯಂಗ್ಯವಾಡಿದ್ದಾರೆ.
ರವಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಎಸ್‌ಟಿಯಿಂದ ಜನಸಾಮಾನ್ಯರಿಗೆ ಏನು ಲಾಭ ಎಂಬುದನ್ನು ಮೊದಲು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕು. ಇದು ಜನರನ್ನು ಮೋಡಿಗೊಳಿಸಲು, ಭ್ರಮೆಯಲ್ಲಿ ತೇಲಿ ಬಿಡಲು ಮೋದಿ ಹೂಡಿದ ತಂತ್ರವಾಗಿದೆ ಎಂದರು.
ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿತ್ತು. ಅಂತಹ ಯಾವುದೇ ಯೋಜನೆಯನ್ನು ಜಾರಿಗೊಳಿಸಲಾಗದ ಕೇಂದ್ರ ಸರಕಾರ ಜಿಎಸ್‌ಟಿ ಬಗ್ಗೆ ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯುವ ಆವಶ್ಯಕತೆಯಿರಲಿಲ್ಲ. ಇದಕ್ಕೆ ನೀಡಲಾಗುವ ಪ್ರಚಾರ ಕೇವಲ ಜನರನ್ನು ಮರಳುಗೊಳಿಸುವಂತದ್ದಾಗಿದೆ ಎಂದ ಖಾದರ್, ಕೇಂದ್ರ ಸರಕಾರಕ್ಕೆ ರೈತರ ಪರ ಕಾಳಜಿಯಿಲ್ಲ. ರೈತರ ಸಾಲ ಮನ್ನಾವನ್ನು ಫ್ಯಾಶನ್ ಎಂದು ಕೇಂದ್ರ ಸಚಿವರು ಹೇಳುವುದಾದರೆ, ಕೇಂದ್ರ ಸರಕಾರದಿಂದ ಇನ್ಯಾವ ಜನಪರ ಯೋಜನೆಯನ್ನು ನಿರೀಕ್ಷಿಸಲು ಸಾಧ್ಯ ಎಂದರು.
ಒಂದು ದೇಶ, ಒಂದು ತೆರಿಗೆ ಎಂಬುದು ಹೇಳಿಕೆಗೆ ಮಾತ್ರ ಸೀಮಿತ. ತನ್ನ ತಪ್ಪು ಆರ್ಥಿಕ ನೀತಿಗೆ ಜನರನ್ನು ಬಲಿಗೊಡುತ್ತಿವೆ. ಗೊಂದಲ ಸೃಷ್ಟಿಸಿ ಜನರನ್ನು ವಂಚಿಸುತ್ತಿದೆ ಎಂದು ಆಪಾದಿಸಿದ ಸಚಿವ ಖಾದರ್, 2006ರಲ್ಲಿ ಕೇಂದ್ರದ ಯುಪಿಎ ಸರಕಾರ ಜಿಎಸ್‌ಟಿ ಜಾರಿಗೊಳಿಸಲು ಮುಂದಾದಾಗ ಇದೇ ಮೋದಿ ವಿರೋಧಿಸಿದ್ದರು. ಇದೀಗ ಮೋದಿ ಅದನ್ನು ಜಾರಿಗೊಳಿಸಿದ್ದಾರೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್ ಜಿಎಸ್‌ಟಿಗೆ ಬೆಂಬಲ ನೀಡಿದೆ. ಆದರೆ, ಅದನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಜಬ್ಬಾರ್ ಬೋಳಿಯಾರ್, ಪಕ್ಷದ ಮುಖಂಡರಾದ ಶ್ರೀನಿವಾಸ ಶೆಟ್ಟಿ, ಯು.ಬಿ. ಸಲೀಂ, ಮುಸ್ತಫಾ ಮಲಾರ್ ಮತ್ತಿತರರು ಉಪಸ್ಥಿತರಿದ್ದರು.