ನಾಡಿಗಿಳಿಯಿತು ಕಾಡಾನೆ: ಅಪಾರ ಕೃಷಿ ನಾಶ
ಕಾಸರಗೋಡು,ಜು.2: ಮಾಣಿಮೂಲೆಯಲ್ಲಿ ಕಾಡಾನೆಗಳು ಕೃಷಿ ತೋಟಗಳನ್ನು ಹಾನಿಗೊಳಿಸಿವೆ. ಕರ್ನಾಟಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆರಳ ಗಡಿ ಗ್ರಾಮವಾದ ಮಾನಿಮೂಲೆಯ ತಟ್ಟ್ ಕಾಲೊನಿ ಪರಿಸರಕ್ಕೆ ತಲುಪಿದ ಕಾಡಾನೆಗಳು ಡಾ. ಎಂ. ಮಧುಸೂದನ್ ನಂಬ್ಯಾರ್ ಅವರ ಕೃಷಿ ತೋಟದ ಮುನ್ನೂರರಷ್ಟು ಬಾಳೆ ಗಿಡಗಳು, 10 ತೆಂಗು, 20 ಕಂಗು ನಾಶಗೊಳಿಸಿವೆ.
ಸಮೀಪದ ಮೋಹನನ್ ನಂಬ್ಯಾರ್ ಅವರ ಇಪ್ಪತ್ತರಷ್ಟು ಬಾಳೆಗಳು ನಾಶಗೊಂಡಿದೆ. ತಟ್ಟ್ ಕಾಲೊನಿಯ ಎಂ. ಗೋಪಾಲನ್ ಅವರ ನಾಲ್ಕು ತೆಂಗು, ಒಂದು ಕಂಗು, ಒಂದು ಹಲಸು, ನಾಲ್ಕು ರಬ್ಬರ್ ಮರಗಳು ನಾಶಗೊಂಡಿವೆ. ತಟ್ಟ್ ಕಾಲೊನಿಯ ನಾರಾಯಣನ್ ಅವರ ಒಂದು ತೆಂಗು, ಐದು ಬಾಳೆ, ನಾಲ್ಕು ರಬ್ಬರ್ ಗಿಡಗಳನ್ನು ಕಾಡಾನೆಗಳ ಗುಂಪು ನಾಶಗೊಳಿಸಿದೆ.
ರವಿ ಎಂಬವರ ಸುಮಾರು ಬಾಳೆಗಿಡಗಳು, ಕಾಲೊನಿ ಸಮೀಪದ ಈಚಲು ಮರ ನಾಶಗೊಂಡಿದೆ. ಶನಿವಾರದಂದು ಮಧ್ಯರಾತ್ರಿ 12 ಗಂಟೆಯ ಬಳಿಕ ಮತ್ತು ಮುಂಜಾನೆ ನಾಲ್ಕು ಗಂಟೆಗೆ ಮುನ್ನ ಆನೆಗಳು ದಾಳಿ ಮಾಡಿವೆ. ಬಿರುಸಿನ ಮಳೆಗೆ ವಿದ್ಯುತ್ ಇಲ್ಲದ ಸಂದರ್ಭ ನಾಡಿಗಿಳಿದ ಆನೆಗಳು ಕಾಲೊನಿ ನಿವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ. ಮೂರು ದಿನಗಳಿಂದ ಎಂಟರಷ್ಟು ಆನೆಗಳ ತಂಡ ಕರ್ನಾಟಕ ಅರಣ್ಯ ಪ್ರದೇಶದಲ್ಲಿ ವಿಹರಿಸುತ್ತಿದ್ದುದಾಗಿ ನಾಗರಿಕರು ಹೇಳಿದ್ದಾರೆ. ಹಗಲು ವೇಳೆಯಲ್ಲಿ ಅರಣ್ಯ ಪ್ರದೇಶದಲ್ಲಿ ವಿಹರಿಸುತ್ತಿರುವ ಆನೆಗಳ ಗುಂಪು ಜನ ನಿದ್ರೆಗೆ ಜಾರಿದೊಡನೆ ಕೃಷಿತೋಟಗಳಿಗೆ ಇಳಿದು ಕೃಷಿನಾಶ ಮಾಡುತ್ತಿವೆ.