​ರಾಯಭಾರಿ ಕಚೇರಿ ಸಂಪರ್ಕಿಸಲು ಜಾಧವ್ ರ 18ನೆ ಪ್ರಯತ್ನ ವಿಫಲ

Update: 2017-07-02 11:54 GMT

ಕರಾಚಿ, ಜು.2: ಭಾರತದ ನಿವೃತ್ತ ಸೈನಾಧಿಕಾರಿ ಕುಲಭೂಷಣ್‌ ಯಾದವ್  ಅವರು ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ನಡೆಸಿದ   ಹದಿನೆಂಟನೆ ಪ್ರಯತ್ನವನ್ನು ಪಾಕಿಸ್ತಾನ ವಿಫಲಗೊಳಿಸಿದೆ

ಕುಲಭೂಷಣ್  ಮನವಿಯನ್ನು ತಿರಸ್ಕರಿಸಿರುವ ಪಾಕಿಸ್ತಾನವು ಭಯೋತ್ಪಾದನೆಗೆ ನೆರವು ನೀಡುತ್ತಿದೆ ಎಂಬ ಭಾರತದ ಆರೋಪವನ್ನು ನಿರಾಕರಿಸಿದೆ ಎಂದು ’ಇಂಡಿಯಾ ಟುಡೆ” ಪತ್ರಿಕೆ  ವರದಿ ಮಾಡಿದೆ.

ಕುಲ್ ಭೂಷಣ್ ಜಾಧವ್ ವಿಚಾರಕ್ಕೆ ಸಂಬಂಧಿಸಿ ಭಾರತದ ವಾದವು ತರ್ಕದ ಹಾಸ್ಯವಾಗಿದೆ ಎಂದು ಪಾಕ್‌ ಬಣ್ಣಿಸಿದೆ. "ಕಮಾಂಡರ್ ಜಾಧವ್ ಅವರ ಪ್ರಕರಣವನ್ನು ಸಾಮಾನ್ಯ ಕೈದಿಗಳು ಮತ್ತು ಮೀನುಗಾರರ ಜೊತೆ ಹೋಲಿಸಲು ಭಾರತ ಪ್ರಯತ್ನ ನಡೆಸುತ್ತಿದ್ದು, ಇದು ತರ್ಕಶಾಸ್ತ್ರದ ಒಂದು ದುರಂತವಾಗಿದೆ" ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಎರಡು ದೇಶಗಳು ಪರಸ್ಪರ ಜೈಲುಗಳಲ್ಲಿ ಬಂಧಿಸಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡ ಒಂದು ದಿನದ ಬಳಿಕ ಪಾಕ್ ನ ವಿದೇಶಾಂಗ ಕಚೇರಿ ಈ ಹೇಳಿಕೆ ನೀಡಿದೆ. ಪಾಕಿಸ್ತಾನ ಭಾರತಕ್ಕೆ ತಿಳಿಸಿದ ಪಟ್ಟಿಯಲ್ಲಿ ಸುಮಾರು 500 ಮೀನುಗಾರರು ಸೇರಿದಂತೆ ಕನಿಷ್ಠ 546 ಭಾರತೀಯರು ಪಾಕಿಸ್ತಾನ ಜೈಲಿನಲ್ಲಿರುವ ವಿಚಾರ ಬೆಳಕಿಗೆ ಬಂದಿದೆ. 

"ಕಮಾಂಡರ್ ಜಾಧವ್ ಅವರು ಭಾರತೀಯ ನೌಕಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಬೇಹುಗಾರಿಕೆ, ಭಯೋತ್ಪಾದನೆ ಮತ್ತು ವಿನಾಶಕಾರಿ ಚಟುವಟಿಕೆಗಳಿಗಾಗಿ ಪಾಕಿಸ್ತಾನಕ್ಕೆ ತನ್ನ ಗುಪ್ತಚರ ಸಂಸ್ಥೆ RAW  ಕಳುಹಿಸಿತ್ತು. ಇದರಿಂದಾಗಿ ಅನೇಕ ಮುಗ್ಧರು ಬಲಿಯಾಗಿದ್ದರು.  ಅಪಾರ ಆಸ್ತಿಪಾಸ್ತಿ  ಹಾನಿಯಾಗಿತ್ತು." ಎಂದು ವಿದೇಶಾಂಗ ಕಚೇರಿ ತಿಳಿಸಿದೆ.

ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ  ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟ ಜಾಧವ್ ಮತ್ತು ಪಾಕಿಸ್ತಾನಕ್ಕೆ ಪ್ರವೇಶಿಸಲು ಯತ್ನಿಸಿ ಮೂರು ವರ್ಷ ಜೈಲು ಶಿಕ್ಷೆಗೆ ಒಳಗಾದ ಭಾರತೀಯ ಎಂಜಿನಿಯರ್ ಮತ್ತು ವ್ಯಾಪಾರಿ ಹಮೀದ್ ನೆಹಲ್ ಅನ್ಸಾರಿ ಸೇರಿದಂತೆ ಪಾಕಿಸ್ತಾನದ ಜೈಲಿನಲ್ಲಿರುವ ಭಾರತದ ಕೈದಿಗಳಿಗೆ  ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಭಾರತ ಶನಿವಾರ ಮಾಡಿದ್ದ ಮನವಿಯನ್ನು ಪಾಕ್‌  ತಿರಸ್ಕರಿಸಿದೆ.

ಭಾರತವು ಮತ್ತೊಮ್ಮೆ ಭಾರತೀಯ ಕೈದಿಗಳ ಬಿಡುಗಡೆ ಮತ್ತು ವಾಪಸಾತಿಗಾಗಿ ಪಾಕಿಸ್ತಾನವನ್ನು ವಿನಂತಿಸಿದೆ. ಜಾಧವ್ ಅವರನ್ನು ಮಾರ್ಚ್ 3, 2016 ರಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಿಂದ ಬಂಧಿಸಲಾಗಿತ್ತು. ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ  ಜಾಧವ್‌ ತಾನು ಬಲೋಚಿಸ್ತಾನದಲ್ಲಿ ಬೇಹುಗಾರಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿರುವ ಬಗ್ಗೆ  ವೀಡಿಯೊ ದಾಖಲೆ ಇದೆ ಎಂದು  ಪಾಕಿಸ್ತಾನ ಹೇಳಿದೆ, ಆದರೆ ಭಾರತ ಇದನ್ನು ತಿರಸ್ಕರಿಸಿದೆ. ಜಾಧವ್‌ ಅವರಿಗೆ  ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಎಪ್ರಿಲ್ ನಲ್ಲಿ ಮರಣದಂಡನೆ ವಿಧಿಸಿತ್ತು.

ಜಾಧವ್ ಅವರಿಗೆ ಮರಣದಂಡನೆ ವಿಧಿಸಿರುವುದನ್ನು ಭಾರತ ಹೇಗ್ ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕ್ ನ ಆದೇಶಕ್ಕೆ ತಾತ್ಕಾಲಿಕ ತಡೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News