ಜಪ್ಪಿನಮೊಗರಿನಲ್ಲಿ ಡಿವೈಎಫ್‌ಐ, ಸಿಪಿಎಂ ಕಾರ್ಯಕರ್ತರಿಂದ ಶ್ರಮದಾನ

Update: 2017-07-02 12:17 GMT

ಮಂಗಳೂರು, ಜು.1: ಸ್ಥಳೀಯ ಕಾರ್ಪೋರೇಟರ್ ಹಾಗೂ ನಗರಪಾಲಿಕೆಯಿಂದ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟು ಜಪ್ಪಿನಮೊಗರಿನ ಕೆಟ್ಟು ಹೋಗಿರುವ ಮುಖ್ಯರಸ್ತೆಯನ್ನು ಡಿವೈಎಫ್‌ಐ ಹಾಗೂ ಸಿಪಿಐಎಂನ ಬಜಾಲ್, ಜಪ್ಪಿನಮೊಗರು ಘಟಕದ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ಸರಿಪಡಿಸಿದರು.

ಕಳೆದ ಹಲವು ವರುಷಗಳಿಂದ ನನೆಗುದಿಗೆ ಬಿದ್ದಿರುವ ಈ ರಸ್ತೆಯು ಸಂಪೂರ್ಣವಾಗಿ ಹೊಂಡಮಯವಾಗಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹಾಗೂಜನ ನಡೆದಾಡಲು ಅಯೋಗ್ಯವಾಗಿತ್ತು.ಈ ರಸ್ತೆಯ ರಿಪೇರಿಗಾಗಿ ಹಾಗೂ ಕಾಂಕ್ರಿಟೀಕರಣಕ್ಕೆ ಒತ್ತಾಯಿಸಿ ಇಲ್ಲಿನ ಡಿವೈಎಫ್‌ಐ, ಸಿಪಿಎಂನ ಕಾರ್ಯಕರ್ತರು ಹಲವು ಬಾರಿ ಪ್ರತಿಭಟನೆಯನ್ನು ನಡೆಸುವ ಮೂಲಕ ನಗರಾಡಳಿತಕ್ಕೆ ಹಾಗೂ ಸ್ಥಳೀಯ ಜನಪ್ರತಿನಿಧಿಯ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಸ್ಪಂದನೆ ದೊರಕದೆ ಆಕ್ರೋಶಗೊಂಡಿರುವ ಡಿವೈಎಫ್‌ಐ ಕಾರ್ಯಕರ್ತರು ಇತ್ತೀಚೆಗೆ ಈ ರಸ್ತೆಯ ಹೊಂಡಗುಂಡಿಗಳಲ್ಲಿ ಗಿಡನೆಡುವ ಮೂಲಕ ಗಮನ ಸೆಳೆದಿದ್ದರು. ಇಂದು ಮತ್ತೆ ಪ್ರತಿಭಟನೆಯ ಮುಂದುವರಿದ ಭಾಗವಾಗಿ ರಸ್ತೆಯ ಗುಂಡಿಗಳನ್ನು ಕಲ್ಲು ಮಣ್ಣುಗಳಿಂದ ಮುಚ್ಚುವ ಮೂಲಕ ಶ್ರಮದಾನ ನಡೆಸಿದರು.

 ಈ ವೇಳೆ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಸಿಪಿಐಂನ ಸ್ಥಳೀಯ ಮುಖಂಡರಾದ ದಿನೇಶ್ ಶೆಟ್ಟಿ ಜಪ್ಪಿನಮೊಗರು, ಮನೋಜ್ ಶೆಟ್ಟಿ, ಸುರೇಶ್ ಬಜಾಲ್ , ಡಿವೈಎಫ್‌ಐ ಮುಖಂಡರಾದ ಪವನ್ ಸುಲಾಯ, ಕೌಶಿಕ್ ಶೆಟ್ಟಿ, ರಿತೇಶ್ ಬಜಾಲ್, ವರಪ್ರಸಾದ್, ಅಭಿಲಾಶ್, ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಮುಖಂಡರಾದ ಮನೋಜ್ ಪೂಜಾರಿ, ಎಸ್‌ಎಫ್‌ಐನ ಸಂದೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News