ಮಣಗಳ್ಳಿ ತಾ.ಪಂ ಉಪಚುನಾವಣೆ : ಶೇ.76.86 ಮತದಾನ
ಹನೂರು,ಜು.2:ಮಣಗಳ್ಳಿ ತಾ.ಪಂ ಉಪಚುನಾವಣೆಯು ಸಣ್ಣಪುಟ್ಟ ವಾಗ್ವಾದ ಗಳನ್ನು ಹೊರತುಪಡಿಸಿ ಶಾಂತಿಯುವಾಗಿ ನಡೆದಿದ್ದು ಶೇ.76.86 ಮತದಾನವಾಗಿದೆ.
ಮಣಗಳ್ಳಿ ತಾ.ಪಂ ಕ್ಷೇತ್ರ ವ್ಯಾಪ್ತಿಗೆ ಅಲಗುಮೂಲೆ, ಚಿಂಚಳ್ಳಿ, ಎಡಳ್ಳಿದೊಡ್ಡಿ, ಮಣಗಳ್ಳಿ, ನಾಗನತ್ತ, ಭೈರನತ್ತ ಮತ್ತು ನಂಜೇಒಡೆಯರದೊಡ್ಡಿ ಗ್ರಾಮಗಳು ಸೇರಿದ್ದು ಕಳೆದ ವರ್ಷ ಜರುಗಿದ ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾದಪ್ಪ ವಿಜೇತರಾಗಿದ್ದರು. ಅನಾರೋಗ್ಯದಿಂದ ಮಾದಪ್ಪ ಅವರು ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಗೊಳಿಸಲಾಗಿತ್ತು. ಈ ಉಪಚುನಾವಣೆಯಲ್ಲಿ ಒಟ್ಟು 5578 ಮತದಾರರಿದ್ದು 4287 ಮತದಾರರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಮೃತ ಮಾದಪ್ಪರ ಪುತ್ರಗೆ ಟಿಕೆಟ್: ತಾ.ಪಂ ಸದಸ್ಯ ಮಾದಪ್ಪ ಮೃತಪಟ್ಟ ಬಳಿಕ ಘೋಷಣೆಯಾದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅವರ ಪುತ್ರ ಮಹದೇವಸ್ವಾಮಿಯನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಬಿಜೆಪಿ ಪಕ್ಷದಿಂದ ಉದ್ಯಮಿ ಮಹಾದೇವಪ್ಪ ಅವರ ಅಳಿಯ ಲೋಕೇಶ್ ಸ್ಫರ್ಧಿಸಿದ್ದಾರೆ.
ಪ್ರತಿಷ್ಠೆಯ ಕಣ: ಕ್ಷೇತ್ರ ವ್ಯಾಪ್ತಿಯಲ್ಲಿ ಜರುಗುತ್ತಿರುವ ಈ ಉಪಚುನಾವಣೆ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡಕ್ಕೂ ಪ್ರತಿಷ್ಠೆಯಾಗಿ ಪರಿಣಮಿಸಿದೆ.