×
Ad

ಪೇಜಾವರ ಶ್ರೀ ವಿಚಾರದಲ್ಲಿ ಅನಗತ್ಯ ಚರ್ಚೆ: ಬಾಳೆಕುದ್ರು ಶ್ರೀ

Update: 2017-07-02 20:02 IST

ಉಡುಪಿ, ಜು.2: ಪೇಜಾವರ ಶ್ರೀ ಹಮ್ಮಿಕೊಂಡ ಇಫ್ತಾರ್ ಕೂಟದ ಬಗ್ಗೆ ಅನಗತ್ಯ ಚರ್ಚೆಗಳು ನಡೆಯುತ್ತಿವೆ. ಸಮಾಜದಲ್ಲಿ ಭಾರತೀಯ ಸಂಸ್ಕೃತಿ, ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳುವ ಬದಲು ಈ ರೀತಿಯ ಅನಗತ್ಯ ಚರ್ಚೆಗಳು ಹೆಚ್ಚಾಗುತ್ತಿವೆ ಎಂದು ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀವಿಶ್ವಕರ್ಮಾನ್ವಯ ಪ್ರದೀಪಿಕಾ ಗ್ರಂಥ ಪುನರ್ ಮುದ್ರಣಾ ಸಮಿತಿಯ ವತಿಯಿಂದ ರವಿವಾರ ಕುಂಜಿಬೆಟ್ಟು ಶ್ರೀಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಶ್ರೀವಿಶ್ವಕರ್ಮಾನ್ವಯ ಪ್ರದೀಪಿಕಾ ಪರಿಷ್ಕೃತ ಗ್ರಂಥವನ್ನು ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಭಾರತ ದೇಶದಲ್ಲಿರುವ ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ನಮ್ಮ ದೇಶದವರೇ ಹೊರತು ಹೊರಗಿನಿಂದ ಬಂದವರಲ್ಲ. ಆದರೆ ಅವರವರ ಆಹಾರ ಪದ್ಧತಿಗಳು ಮಾತ್ರ ಬೇರೆಯಾಗಿದೆ. ಧರ್ಮಗಳ ಮಧ್ಯೆ ಇರುವ ಸೌಹಾರ್ದವನ್ನು ರಾಜಕೀಯ ಕಾರಣಗಳಿಂದಾಗಿ ಒಡೆಯಲಾಗುತ್ತಿದೆ ಎಂದರು.
ಭಾರತೀಯ ಸಂಸ್ಕೃತಿ ಅತ್ಯಂತ ಪ್ರಾಚೀನವಾದುದು. ಇದರ ಆದಿ, ಅಂತ್ಯ, ವ್ಯಾಪ್ತಿಯನ್ನು ತಿಳಿಯುವುದು ಬಹಳ ಕಷ್ಟ. ಆದರೆ ಪಾಶ್ಚಿಮಾತ್ಯರ ಪ್ರಭಾವ ದಿಂದಾಗಿ ನಮ್ಮ ಇತಿಹಾಸವನ್ನು ತಪ್ಪಾಗಿ ತಿಳಿದುಕೊಳ್ಳಲಾಗುತ್ತಿದೆ. ಶಾಲಾ ಪಠ್ಯ ಪುಸ್ತಕಗಳಲ್ಲೂ ಅದೇ ರೀತಿ ನಮೂದಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಂಥವನ್ನು ಬಿಡುಗಡೆಗೊಳಿಸಿದ ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ.ಎಚ್.ವಿ.ನರಸಿಂಹಮೂರ್ತಿ ಮಾತನಾಡಿ, ಜಗತ್ತಿನ 48 ಪ್ರಾಚೀನ ಸಂಸ್ಕೃತಿಗಳಲ್ಲಿ ಭಾರತೀಯ ಪ್ರಾಚೀನ ಸಂಸ್ಕೃತಿ ಮಾತ್ರ ಇಂದು ಕೂಡ ಉಳಿದುಕೊಂಡಿದೆ. ಭಾರತೀಯ ಸಂಸ್ಕೃತಿಯ 64 ಕಲೆಗಳಲ್ಲಿ ಶಿಲ್ಪಕಲೆ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ. ಅವುಗಳ ಅನೇಕ ವಿಚಾರಗಳನ್ನು ತಿಳಿಸುವ ಈ ಗ್ರಂಥ ಇಂದಿನ ಕಾಲಕ್ಕೆ ಅವಶ್ಯಕ ಎಂದರು.

ಕಟಪಾಡಿ ಆನೆಗುಂದಿ ಮಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಂಥ ಪುನರ್ ಮುದ್ರಣ ಸಮಿತಿ ಗೌರವಾಧ್ಯಕ್ಷ ತಾಡಿಚರ್ಲ ವೀರ ರಾಘವ ಶರ್ಮ ಬಳ್ಳಾರಿ ವಹಿಸಿದ್ದರು. ಈ ಸಂದರ್ಭ ಗ್ರಂಥ ಸಂಪಾದಕ ಡಾ.ಜಿ.ಜ್ಞಾನಾನಂದ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ.ರಾಘವ ನಂಬಿಯಾರ್, ಚಂದ್ರಕಾಂತ ಶರ್ಮಾ, ಚಂದ್ರೇಶ ಶರ್ಮಾ, ಬಾರಕೂರು ಕಾಳಿಕಾಂಬಾ ದೇವಸ್ಥಾನದ ಆಡಳಿತಾಧಿಕಾರಿ ಶ್ರೀಧರ್ ವಿ., ಕಾರ್ಕಳ ನೆಕ್ಲಾಜೆ ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ ಆಚಾರ್ಯ, ಕಟಪಾಡಿ ವೇಣುಗಿರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News