ಪ್ರಾಚೀನ ಆಯುರ್ವೇದ ಪದ್ಧತಿ ಉಳಿಸಲು ಶಾಸಕರ ಕರೆ
ಮಂಗಳೂರು, ಜು. 2: ಭಾರತದ ಪ್ರಾಚೀನ ಆಯುರ್ವೇದ ಪದ್ಧತಿಯನ್ನು ಮರೆತಿರುವುದಕ್ಕೆ ವಿಷಾದಿಸಿದ ಶಾಸಕ ಜೆ.ಆರ್.ಲೋಬೊ ಅವರು ಆಯುರ್ವೇದ ವೈದ್ಯರು ರಾಯಭಾರಿಗಳಾಗಿ ಆಯುರ್ವೇದ ಪದ್ಧತಿ ಉಳಿಸಬೇಕು ಎಂದು ಹೇಳಿದರು.
ನಗರದ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಹಾಲ್‌ನಲ್ಲಿ ರವಿವಾರ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಫೌಂಡೇಶನ್ ಆಯೋಜಿಸಿದ್ದ ವಿಶೇಷ ಮಕ್ಕಳೊಂದಿಗೆ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇದಗಳಲ್ಲಿ ಆಯುರ್ವೇದ ಪದ್ಧತಿಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದರೂ, ನಮ್ಮವರು ಆ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಆದರೆ, ಆ ಬಗ್ಗೆ ಸಂಶೋಧನೆ ಮಾಡಲು ಜರ್ಮನಿಗೆ ಹೋಗುವ ಪರಿಸ್ಥಿತಿ ಬಂದಿರುವುದು ಖೇದಕರ ಎಂದರು.
ಆಯುರ್ವೇದ ಅಂದರೆ ಮಸಾಜ್ ಪಾರ್ಲರ್‌ಗಳು ಎಂಬಂತಾಗಿದೆ. ಕೇರಳ, ಪಶ್ಚಿಮ ಬಂಗಾಳದಲ್ಲಿ ಮಸಾಜ್ ಪಾರ್ಲರ್‌ಗಳಿಗೆ ನಿಯಮವಿದೆ. ನಮ್ಮಲ್ಲೂ ಮಸಾಜ್ ಪಾರ್ಲರ್‌ಗಳಿಗೆ ನಿಯಮ ಜಾರಿಗೆ ಬರಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಸತೀಶ್ ಭಂಡಾರಿ, ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆಯ ನಿವೃತ್ತ ವೈದ್ಯಕೀಯ ಅಧೀಕ್ಷಕ ಡಾ.ವೈ.ಎನ್. ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಎಚ್.ಆರ್., ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್, ಆಯುಷ್ ಫೌಂಡೇಶನ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಉಪಸ್ಥಿತರಿದ್ದರು.
ಆಯುಷ್ ಫೌಂಡೇಶನ್ ಕಾರ್ಯದರ್ಶಿ ಡಾ.ನಾರಾಯಣ ಆಸ್ರ ಸ್ವಾಗತಿಸಿದರು. ಡಾ.ಸಂದೀಪ್ ಬೇಕಲ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಶೋಭಾ ಕಾರ್ಯಕ್ರಮ ನಿರೂಪಿಸಿದರು.