ಅನುಮತಿ ಪತ್ರದೊಂದಿಗೆ ಜಾನುವಾರು ಸಾಗಾಟ ಮಾಡುತ್ತಿದ್ದವರಿಗೆ ಥಳಿಸಿದ ಗೋರಕ್ಷಕರು
ಗುವಾಹಟಿ,ಜು.2: ಗುವಾಹಟಿಯ ಹೊರವಲಯದಲ್ಲಿ ರವಿವಾರ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂರು ವಾಹನಗಳನ್ನು ತಡೆದ ಗೋರಕ್ಷಕರ ಗುಂಪು ಜಾನುವಾರುಗಳ ಸಾಗಾಣಿಕೆಗೆ ಅಧಿಕೃತ ಅನುಮತಿ ಪತ್ರವಿದ್ದರೂ ಚಾಲಕರು ಮತ್ತು ಸಹಾಯಕರನ್ನು ಹೊರಗೆಳೆದು ಥಳಿಸಿರುವುದು ವರದಿಯಾಗಿದೆ. ಆದರೆ ಈ ಘಟನೆಯನ್ನು ದೃಢಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.
ಗುವಾಹಟಿಯ ಹೊರವಲಯದ ಸೋನಾಪುರದ ಬಳಿ ಹಿಂದು ಯುವ ಛಾತ್ರ ಪರಿಷದ್‌ನ ದಿಮೋರಿಯಾ ಘಟಕದ ಕಾರ್ಯಕರ್ತರು ಜಾನುವಾರುಗಳನ್ನು ಸಾಗಿಸುತ್ತಿದ್ದ ಒಂದು ಲಾರಿ ಮತ್ತು ಎರಡು ಟೆಂಪೋಗಳನ್ನು ತಡೆದಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದ್ದು, ಅಲ್ಲಿಗೆ ತೆರಳಿ ವಾಹನಗಳು ಮತ್ತು ಚಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೋರ್ವರು ದೂರವಾಣಿಯಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ಸಾಗಾಟಗಾರರ ಬಳಿ ಅಧಿಕೃತ ದಾಖಲೆ ಪತ್ರಗಳಿದ್ದವು ಎಂದರು.
ಗೋರಕ್ಷಕರು ಚಾಲಕರನ್ನು ಮತ್ತು ಸಹಾಯಕರನ್ನು ಥಳಿಸುತ್ತಿರುವ ವೀಡಿಯೊ ಫೂಟೇಜ್‌ಗಳನ್ನು ಸ್ಥಳೀಯ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿವೆಯಾದರೂ, ಹಲ್ಲೆ ನಡೆದಿರುವುದನ್ನು ಪೊಲೀಸರು ದೃಢಪಡಿಸಲಿಲ್ಲ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ತಿಳಿಸಿದರು.