×
Ad

ಏರ್ ಇಂಡಿಯಾದ ಖಾಸಗೀಕರಣ:ಪ್ರತಿಭಟನೆಗೆ ಉದ್ಯೋಗಿಗಳ ತಯಾರಿ

Update: 2017-07-02 22:14 IST

ಹೊಸದಿಲ್ಲಿ,ಜು.2: ಏರ್ ಇಂಡಿಯಾ ಖಾಸಗೀಕರಣದ ಸರಕಾರದ ನಿರ್ಧಾರದ ವಿರುದ್ಧ ಆಂದೋಲನಕ್ಕಾಗಿ ತನ್ನ ಸದಸ್ಯರನ್ನು ಸಂಘಟಿಸುವ ನಿಟ್ಟಿನಲ್ಲಿ ಸಂಸ್ಥೆಯ ಉದ್ಯೋಗಿಗಳ ಅತ್ಯಂತ ದೊಡ್ಡ ಒಕ್ಕೂಟವಾಗಿರುವ ಏರ್ ಕಾರ್ಪೊರೇಷನ್ಸ್ ಎಂಪ್ಲಾಯೀಸ್ ಯೂನಿಯನ್(ಎಸಿಇಯು)ಈ ವಾರ ತನ್ನ ಸರ್ವಸದಸ್ಯರ ಸಭೆಯನ್ನು ಕರೆದಿದೆ.

ಏರ್ ಇಂಡಿಯಾದಲ್ಲಿನ ತನ್ನ ಹೂಡಿಕೆ ಹಿಂದೆಗೆತಕ್ಕಾಗಿ ಸರಕಾರವು ರಚಿಸಲಿರುವ ಸಚಿವರ ಸಮಿತಿಯನ್ನು ಭೇಟಿಯಾಗಲೂ ಎಸಿಇಯು ಉದ್ದೇಶಿಸಿದೆ. ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಎಸಿಇಯು ಸದಸ್ಯರೋರ್ವರು, ಸರಕಾರದ ಕ್ರಮವು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಲಾಭವನ್ನುಂಟು ಮಾಡುವ ಸ್ಪಷ್ಟ ಉದ್ದೇಶವನ್ನು ಹೊಂದಿದೆ. ತೆರಿಗೆದಾತರ ಹಣದ ಬಗ್ಗೆ ಸರಕಾರಕ್ಕೆ ಅಷ್ಟೊಂದು ಕಾಳಜಿಯಿದ್ದರೆ ಅದು ಕಾರ್ಪೊರೇಟ್ ಸಂಸ್ಥೆಗಳು ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಪಡೆದಿರುವ 7.5 ಲ.ಕೋ.ರೂ.ಸಾಲವನ್ನೇಕೆ ವಸೂಲು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಏರ್‌ಇಂಡಿಯಾದ ತಾಂತ್ರಿಕೇತರ ಸಿಬ್ಬಂದಿಗಳ ಒಕ್ಕೂಟವಾಗಿರುವ ಎಸಿಇಯು 21,137 ಉದ್ಯೋಗಿಗಳ ಪೈಕಿ ಸುಮಾರು 8,000 ಉದ್ಯೋಗಿಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ.

ಖಾಸಗೀಕರಣವನ್ನು ವಿರೋಧಿಸಲು ಏರ್ ಇಂಡಿಯಾದ ಏಳು ಕಾರ್ಮಿಕ ಯೂನಿಯನ್‌ಗಳು ಈಗಾಗಲೇ ಪರಸ್ಪರ ಕೈಜೋಡಿಸಿವೆ. ಕಳೆದ ತಿಂಗಳು ನಾಗರಿಕ ವಾಯುಯಾನ ಸಚಿವ ಅಶೋಕ ಗಜಪತಿ ರಾಜು ಅವರಿಗೆ ಪತ್ರವೊಂದನ್ನು ಬರೆದಿರುವ ಅವು ‘ಕೈಗಾರಿಕಾ ಅಶಾಂತಿ’ಯ ಎಚ್ಚರಿಕೆಯನ್ನು ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News