×
Ad

ಆರೋಪಗಳನ್ನು ಸಾಬೀತುಪಡಿಸಲು ಪುರಾವೆಗಳಿಲ್ಲ ಎಂದ ಉತ್ತರಪ್ರದೇಶ ಪೊಲೀಸರು

Update: 2017-07-03 15:58 IST

ಲಕ್ನೋ, ಜು.3: ನಲ್ವತ್ತೈದು ವರ್ಷದ ಅತ್ಯಾಚಾರ ಮತ್ತು ಆ್ಯಸಿಡ್ ದಾಳಿ ಸಂತ್ರಸ್ತೆಯೊಬ್ಬಳು ತನ್ನ ಮೇಲೆ 4ನೇ ಬಾರಿ ಶನಿವಾರ ರಾತ್ರಿ ಅಲಿಗಂಜ್ ಪ್ರದೇಶದಲ್ಲಿ ಆ್ಯಸಿಡ್ ದಾಳಿ ನಡೆದಿದೆಯೆಂದು ಆರೋಪಿಸಿದ್ದರೆ, ಈ ಆರೋಪವನ್ನು ಪುಷ್ಠೀಕರಿಸುವಂತಹ ಯಾವುದೇ ಪುರಾವೆಗಳು ತಮಗೆ ದೊರೆತಿಲ್ಲ ಎಂದು ಫೊರೆನ್ಸಿಕ್ ತಜ್ಞರ ತನಿಖೆಯಿಂದ ತಿಳಿದು ಬಂದಿದೆಯೆಂದು ಲಕ್ನೋ ಪೊಲೀಸರು ಹೇಳಿದ್ದಾರೆ.

ತನ್ನ ಮೇಲೆ 2009ರಲ್ಲಿ ಸಾಮೂಹಿಕ ಅತ್ಯಾಚಾರಗೈದ ಇಬ್ಬರು ಪುರುಷರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ದಾಖಲಿಸಿರುವ ಮಹಿಳೆ, ತಾನು ವಾಸವಾಗಿರುವ ಮಹಿಳೆಯರ ಹಾಸ್ಟೆಲ್ ಒಳಗೆ ತನ್ನ ಮೇಲೆ ಶನಿವಾರ ದಾಳಿ ನಡೆಯಿತು ಹಾಗೂ ದಾಳಿಕೋರರು ಹಾಸ್ಟೆಲ್ ಕಂಪೌಂಡ್ ಗೋಡೆಯನ್ನು ಹಾರಿ ಪರಾರಿಯಾದರು ಎಂದು ಹೇಳಿಕೊಂಡಿದ್ದಾಳೆ.

ಮುಖ ಹಾಗೂ ಭುಜದ ಬಲಭಾಗದಲ್ಲಿ ಆಕೆಗೆ ಗಾಯಗಳುಂಟಾಗಿದ್ದು ಆಕೆ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಹಾನಗರ ಸ್ಟೇಟ್ ಫೊರೆನ್ಸಿಕ್ ಪ್ರಯೋಗಾಲಯದ ತಜ್ಞರು ಸ್ಥಳ ಪರಿಶೀಲನೆಗೈದಿದ್ದು, ಅಲ್ಲಿ ಖಾಲಿ ಮಿನರಲ್ ವಾಟರ್ ಬಾಟಲಿ ಪತ್ತೆಯಾಗಿದ್ದರೆ, ಅದರ ಮುಚ್ಚಳ ಮಹಿಳೆ ದಾಳಿಗಿಂತ ಸ್ವಲ್ಪ ಮುಂಚೆ ಹೋಗಿದ್ದ ಶೌಚಾಲಯದಲ್ಲಿ ಪತ್ತೆಯಾಗಿದೆ. ತಾನು ಶೌಚಾಲಯದಿಂದ ಹೊರಬಂದ ಕೂಡಲೇ ತನ್ನ ಮೇಲೆ ದಾಳಿ ನಡೆದಿದೆ ಎಂದು ಮಹಿಳೆ ಹೇಳಿಕೊಂಡಿದ್ದಳು.

ಸ್ಥಳದಲ್ಲಿ ಆ್ಯಸಿಡ್ ಕುರುಹುಗಳು ಅಥವಾ ಯಾವುದೇ ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲವೆಂದು ಹೇಳಲಾಗಿದೆ. ಮೇಲಾಗಿ ಶನಿವಾರ ಮಳೆ ಬಂದಿದ್ದರಿಂದ ದುಷ್ಕರ್ಮಿಗಳು ಬಂದಿದ್ದೇ ಆದಲ್ಲಿ ಅವರ ಹೆಜ್ಜೆ ಗುರುತುಗಳು ಅಲ್ಲಿ ಖಂಡಿತವಾಗಿಯೂ ಇರುತ್ತಿತ್ತು ಎಂದು ಫೊರೆನ್ಸಿಕ್ ತಜ್ಞರೊಬ್ಬರು ಹೇಳಿದ್ದಾರೆ.

ಹಾಸ್ಟೆಲ್ ನ ಇತರ ನಿವಾಸಿಗಳು, ಮಾರ್ಚ್ 23ರಂದು ಮಹಿಳೆ ಮೇಲೆ ದಾಳಿ ನಡೆದ ನಂತರ ಆಕೆಗೆ ಒದಗಿಸಲಾಗಿರುವ ಸೆಕ್ಯುರಿಟಿ ಗಾರ್ಡ್ ರಾಜೇಶ್ ಹಾಗೂ ಗನ್ ಮ್ಯಾನ್ ಸಂದೀಪ್ ಕುಮಾರ್ ಕೂಡ ಹಾಸ್ಟೆಲ್ ಕಂಪೌಂಡಿನೊಳಗೆ ಯಾರೂ ಬಂದಿದ್ದನ್ನು ನೋಡಿಲ್ಲ.

ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಹೊತ್ತ ಭೊಂಡು ಸಿಂಗ್ ಹಾಗೂ ಗುಡ್ಡು ಸಿಂಗ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತಾದರೂ ಅವರಿಬ್ಬರೂ ಆ ದಿನ ರಾಯ್ ಬರೇಲಿಯ ಉಂಚಹಾರ್ ಎಂಬ ಸ್ಥಳದಲ್ಲಿ ತಮ್ಮ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಆ್ಯಸಿಡ್ ದಾಳಿ ಸಂತ್ರಸ್ತರು ನಡೆಸುವ ಶೆರೋಸ್ ಹ್ಯಾಂಗ್ ಔಟ್ ಕೆಫೆಯಲ್ಲಿ ಮಹಿಳೆ ದುಡಿಯುತ್ತಿದ್ದು, ಆಕೆಯ ಪತಿ ಮತ್ತು ಇಬ್ಬರು ಮಕ್ಕಳು ರಾಯ್ ಬರೇಲಿಯಲ್ಲಿ ವಾಸವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News