ಅಂತರ್ಜಾತಿ ವಿವಾಹಕ್ಕೆ ವಿರೋಧ: ಮನೆಗೆ ನುಗ್ಗಿ ಆ್ಯಸಿಡ್ ದಾಳಿ

Update: 2017-07-03 12:30 GMT

ಅರಾರಿಯ, ಜು.3: ಯುವತಿಯೊಬ್ಬಳು ಬೇರೊಂದು ಜಾತಿಯ ಯುವಕನನ್ನು ವಿವಾಹವಾಗಿದ್ದರಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು ಯುವತಿ ಪತಿಯ ಸಂಬಂಧಿ ಹಾಗೂ ಸ್ನೇಹಿತರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪರಿಣಾಮ ಏಳು ಮಂದಿ ಗಾಯಗೊಂಡ ಘಟನೆ ಅರಾರಿಯ ಜಿಲ್ಲೆಯ ರಾಣಿಗಂಜ್ ಠಾಣಾ ವ್ಯಾಪ್ತಿಯ ಜಾಗ್ತಾ ಎಂಬ ಗ್ರಾಮದಿಂದ ವರದಿಯಾಗಿದೆ.

ಯುವತಿಯ ಕುಟುಂಬ ಸದಸ್ಯರು ಗಂಡನ ಮನೆಗೆ ನುಗ್ಗಿ ಆಕೆಯನ್ನು ಬಲವಂತವಾಗಿ ತಮ್ಮೊಂದಿಗೆ ಕರೆದುಕೊಂಡು ಹೋಗಲು ಯತ್ನಿಸಿದ್ದರು. ಆಗ ಉಂಟಾದ ಘರ್ಷಣೆಯಲ್ಲಿ ಅವರ ಮೇಲೆ ಆ್ಯಸಿಡ್ ದಾಳಿ ನಡೆಸಲಾಯಿತೆಂದು ಯುವತಿ ಪ್ರಿಯಾಂಕ ಕುಮಾರಿ ಹೇಳಿದ್ದಾಳೆ.

ಪ್ರಿಯಾಂಕ ಮಾರ್ಚ್ 14ರಂದು ದಿಂಪಾಲ್ ಚೌಧುರಿ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಳು. ಆಗ ಆಕೆಯ ತಂದೆ ನೀಡಿದ ದೂರಿನಂತೆ ಪೊಲೀಸರು ದಿಂಪಾಲ್ ಸೇರಿದಂತೆ ಆತನ ತಾಯಿ, ಸಹೋದರ ಸಹಿತ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಾರ್ಚ್ 20ರಂದು ಪ್ರೇಮಿಗಳು ಅರಾರಿಯ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಅವರಿಬ್ಬರೂ ಪ್ರಬುದ್ಧರಾಗಿರುವುದರಿಂದ ಅವರಿಗಿಷ್ಟವಾದವರೊಡನೆ ಬದುಕುವ ಹಕ್ಕು ಅವರಿಗಿದೆ ಎಂದು ನ್ಯಾಯಾಲಯ ಹೇಳಿತ್ತು. ನಂತರ ಅವರಿಬ್ಬರು ನ್ಯಾಯಾಲಯದ ಸಮ್ಮುಖದಲ್ಲಿಯೇ ವಿವಾಹವಾಗಿದ್ದರು.

ಸ್ವಲ್ಪ ದಿನ ಎಲ್ಲವೂ ಸರಿಯಾಗಿದ್ದರೂ ಪ್ರಿಯಾಂಕಾಳ ಸಂಬಂಧಿಕರು ದಿಂಪಾಲ್ ಕುಟುಂಬವನ್ನು ಬೆದರಿಸುತ್ತಲೇ ಇದ್ದರು. ರವಿವಾರದಂದು ಅವರ ಮನೆಗೆ ನುಗ್ಗಿ ಪ್ರಿಯಾಂಕಳನ್ನು ಕರೆದುಕೊಂಡು ಹೋಗಲು ಯತ್ನಿಸಿ ಆಕೆಯ ಪತಿಯ ಸಂಬಂಧಿಕರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ. ಪ್ರಿಯಾಂಕ ದೂರಿನಂತೆ ಪೊಲೀಸರು ಏಳು ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News