ತಿರುವೈಲು: ಸಾರ್ವಜನಿಕ ರುದ್ರಭೂಮಿಗೆ ಸ್ಥಳೀಯರ ವಿರೋಧ
ಮಂಗಳೂರು, ಜು. 3: ತಿರುವೈಲು ಗ್ರಾಮದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಕಾಲನಿಯ ಬಳಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ರುದ್ರಭೂಮಿಗೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ರುದ್ರಭೂಮಿ ಸಮೀಪ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ರುದ್ರಭೂಮಿ ಪಕ್ಕದಲ್ಲಿ ಸುಮಾರು 15 ವರ್ಷಗಳಿಂದೀಚೆಗೆ ಕೆಎಚ್‌ಬಿಯಿಂದ 90 ನಿವೇಶನಗಳು ಮಂಜೂರುಗೊಂಡಿದ್ದು, 20 ಮನೆಗಳು ನಿರ್ಮಾಣವಾಗಿ ವಾಸವಾಗಿದ್ದೇವೆ. ಸಮೀಪ ಆಶ್ರಯ ಕಾಲನಿ ಭವಿಷ್ಯನಿಧಿ ಮನೆಗಳು, ದೂರದರ್ಶನ ಕೇಂದ್ರ ಮತ್ತು ವಸತಿ ಗೃಹಗಳು, ವೃದ್ಧಾಶ್ರಮ, ಎದುರು ಕಡೆ ಸರಕಾರಿ ಕ್ಷಯ ರೋಗ ಆಸ್ಪತ್ರೆ ಮತ್ತು ಪಿಲಿಕುಳ ನಿಸರ್ಗಧಾಮವೂ ಇದೆ. ಹಾಗಾಗಿ ಇಲ್ಲಿ ರುದ್ರಭೂಮಿಗೆ ಅವಕಾಶ ನೀಡಬಾರದು ಎಂದು ಸ್ಥಳೀಯರ ಆಗ್ರಹ. ಈ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳಿಂದ ಹಿಡಿದು ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದ್ದೇವೆ ಎಂದು ಸ್ಥಳೀಯ ನಿವಾಸಿ ಕರುಣಾಕರ ಶೆಟ್ಟಿ ಹೇಳಿದರು.
‘‘ವಸತಿ ಗೃಹಗಳಿಗೆ ಸಮೀಪದಲ್ಲೇ ಇರುವ 75 ಸೆಂಟ್ಸ್ ಭೂಮಿಯಲ್ಲಿ ಹಿಂದೂ ರುದ್ರಭೂಮಿಗೆ ಸಿದ್ಧತೆ ನಡೆಯುತ್ತಿದೆ. ನಾವು ಕೆಎಚ್‌ಬಿಯಿಂದ ನಿವೇಶನ ಖರೀದಿಸುವ ವೇಳೆ ನಮಗೆ ಇಲ್ಲಿ ಸ್ಮಶಾನ ಭೂಮಿ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಇಲ್ಲಿರುವ ಖಾಲಿ ಭೂಮಿ ಸರಕಾರಿ ಭೂಮಿ ಎಂದಷ್ಟೇ ತಿಳಿದಿತ್ತು. ಇತ್ತೀಚೆಗೆ ಕೆಲ ಸಮಯದ ಹಿಂದೆ ಈ ಭೂಮಿಯಲ್ಲಿ ರುದ್ರಭೂಮಿಯ ತಯಾರಿ ನಡೆಯುತ್ತಿರುವುದು ತಿಳಿದು ಈ ಬಗ್ಗೆ ಸ್ಥಳೀಯ ಸುಮಾರು 400ರಷ್ಟು ಮಂದಿಯ ಸಹಿಯನ್ನೊಳಗೊಂಡ ಮನವಿಯನ್ನು ಸಂಬಂಧಪಟ್ಟವರಿಗೆ ನೀಡಿದ್ದೇವೆ. ಪ್ರಸಕ್ತ ಮೇಯರ್‌ರವರಿಗೂ ಮನವಿ ಸಲ್ಲಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ’’ ಎಂದು ಕರುಣಾಕರ ಶೆಟ್ಟಿ ತಿಳಿಸಿದರು.
ತಿರುವೈಲು ಗ್ರಾಮದ ಒಟ್ಟು ಜನಸಂಖ್ಯೆ 18,000. ಇದರಲ್ಲಿ ಹಿಂದೂಗಳ ಸಂಖ್ಯೆ 8 ಸಾವಿರ. ಕಳೆದ ನಾಲ್ಕು ವರ್ಷಗಳಲ್ಲಿ ಇಲ್ಲಿ ಆಗಿರುವ ಮರಣ ಸಂಖ್ಯೆ 118. ಪ್ರಸ್ತುತ ಇಲ್ಲಿಯ ಜನರು ಪಚ್ಚನಾಡಿ, ಮೂಡುಶೆಡ್ಡೆಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಿದ್ದಾರೆ.
ತಿರುವೈಲು ವಾರ್ಡಿನ ಪರಾರಿ ಎಂಬಲ್ಲಿ 2.01 ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಿರಿಸಲಾಗಿದೆ. ಮನಪಾದಿಂದ 2008-09ನೆ ಸಾಲಿನಲ್ಲಿ 2 ಲಕ್ಷ ರೂ. ಖರ್ಚು ಮಾಡಿ ಆವರಣ ಗೋಡೆಯನ್ನೂ ಕಟ್ಟಲಾಗಿದೆ. ಅಲ್ಲಿ ಈಗಾಗಲೇ ಮೃತದೇಹಗಳ ಅಂತ್ಯಸಂಸ್ಕಾರ ನಡೆದಿರುವುದಾಗಿಯೂ ಹೇಳಲಾಗುತ್ತಿದೆ. ಹಾಗಾಗಿ ಮತ್ತೆ ಜನವಸತಿ ಪ್ರದೇಶದ ನಡುವೆ ರುದ್ರಭೂಮಿ ಮಾಡುವುದರಿಂದ ಸ್ಥಳೀಯರಿಗೆ ತೊಂದರೆಯಾಗುವುದರಿಂದ ಅದನ್ನು ಕೈಬಿಡಬೇಕು ಎಂದು ಸ್ಥಳೀಯ ಗೃಹಿಣಿ ಪ್ರಜ್ವಲ್ ಎಂಬವರು ಒತ್ತಾಯಿಸಿದರು.
1996-97ನೆರಲ್ಲಿ ಅಂದಿನ ದ.ಕ. ಜಿಲ್ಲಾಧಿಕಾರಿ ಕೆಎಚ್‌ಬಿಗೆ ಭೂಮಿ ನೀಡಿದ್ದರೆ, ಇದರ ಪಕ್ಕದಲ್ಲಿ 2001ರಲ್ಲಿ ಹಿಂದೂ ರುದ್ರಭೂಮಿಗೆ ತಹಶೀಲ್ದಾರರು ಜಾಗ ನೀಡಿ ವಿವಾದ ಸೃಷ್ಟಿಯಾಗಿದೆ. ಪರಾರಿಯಲ್ಲಿ ವಿಶಾಲ ಜಾಗವಿದ್ದು, ಸುತ್ತಮುತ್ತ ಮನೆಗಳೂ ಇರುವುದಿಲ್ಲ ಎಂದು ಅವರು ಹೇಳಿದರು.
ಇಲ್ಲಿ ರುದ್ರುಭೂಮಿ ನಿರ್ಮಾಣವಾದರೆ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಮೃತದೇಹಗಳ ಸುಡುವುದರಿಂದ ಉಂಟಾಗುವ ವಾಸನೆ ಹಾಗೂ ಗಾಳಿಯನ್ನೂ ಸ್ಥಳೀಯರು ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸ್ಥಳೀಯರಾದ ಲಕ್ಷ್ಮಣ್ ಕೋಟ್ಯಾನ್ ಹಾಗೂ ಕೆ.ಪಿ. ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
‘‘ನಾನು ಇಲ್ಲಿ ಕೆಲ ಸಮಯದ ಹಿಂದೆ 20*30 ನಿವೇಶನವನ್ನು ಖರೀದಿಸಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದೆ. ಆದರೆ ಪಕ್ಕದಲ್ಲೇ ಸ್ಮಶಾನ ಇರುವುದರಿಂದ ಮನೆ ಕಟ್ಟುವುದರಿಂದ ಹಿಂದೆ ಸರಿದಿದ್ದೇನೆ’’ ಎಂದು ರುದ್ರಭೂಮಿಗೆ ಮೀಸಲಿಟ್ಟ ಜಾಗದ ಆವರಣಗೋಡೆಗೆ ತಾಗಿಕೊಂಡೇ ಇರುವ ನಿವೇಶನದ ಮಾಲಕ ಪುಷ್ಪರಾಜ್ ಹೇಳಿದರು.
ಗೋಷ್ಠಿಯಲ್ಲಿ ಸ್ಥಳೀಯ ಸುಮಾರು 100ರಷ್ಟು ಸ್ಥಳೀಯರು ಭಾಗವಹಿಸಿ ವಿರೋಧ ವ್ಯಕ್ತಪಡಿಸಿದರು.