“ರಾಜಕಾರಣಿಗಳ ಅಹಂಕಾರಕ್ಕೆ ಮಹಿಳಾ ಅಧಿಕಾರಿ ಬಲಿಪಶು”
ಉತ್ತರಪ್ರದೇಶ, ಜು.3: ಸರಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಬಿಜೆಪಿ ನಾಯಕರನ್ನು ಜೈಲಿಗಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠ ಠಾಕೂರ್ ಅವರ ವರ್ಗಾವಣೆಯಿಂದ ಬುಲಂದ್ ಶಹರ್ ನ ಸ್ಯಾನ ನಿವಾಸಿಗಳು ಆದಿತ್ಯನಾಥ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದಕ್ಷ ಅಧಿಕಾರಿಯ ವರ್ಗಾವಣೆಯಿಂದ “ತಪ್ಪು ಸಂದೇಶ” ರವಾನೆಯಾಗುತ್ತಿದೆ. ರಾಜಕಾರಣಿಗಳ ಅಹಂಕಾರಕ್ಕೆ ಮತ್ತೋರ್ವ ಅಧಿಕಾರಿಯನ್ನು ಬಲಿಪಶು ಮಾಡಲಾಗಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ.
ಬಿಜೆಪಿ ನಾಯಕರು ವಿರುದ್ಧ ಕ್ರಮ ಕೈಗೊಂಡ ಒಂದು ವಾರದ ನಂತರ ಶ್ರೇಷ್ಠರನ್ನು ಗಡಿಜಿಲ್ಲೆಯಾದ ಬಹ್ರೈಚ್ ಗೆ ವರ್ಗಾವಣೆ ಮಾಡಲಾಗಿತ್ತು. “ಪ್ರಭಾವಶಾಲಿ ವ್ಯಕ್ತಿಗಳ ಮಧ್ಯಸ್ಥಿಕೆಯ ಮೂಲಕ ಅವರು ಬಿಜೆಪಿ ನಾಯಕರೊಂದಿಗಿನ ವಿವಾದವನ್ನು ಪರಿಹರಿಸಲು ಯತ್ನಿಸಿದರು” ಎಂದು ಸ್ಯಾನ ವ್ಯಾಪಾರಿ ಮಂಡಲದ ಅಧ್ಯಕ್ಷ ರಾಜೇಶ್ ಚೌಹಾಣ್ ಹೇಳಿದ್ದಾರೆ.
“ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ಹೇಳಿ ಅಧಿಕಾರಿ ಬಿಜೆಪಿ ನಾಯಕ ಪ್ರಮೋದ್ ಕುಮಾರ್ ರನ್ನು ಬಿಡಲು ಅವರು ಯತ್ನಿಸಿದ್ದರು. ಈ ಪ್ರಕರಣವನ್ನು ಉನ್ನತ ಅಧಿಕಾರಿಗಳಿಗೆ ಒಪ್ಪಿಸುವುದಾಗಿ ಬಿಜೆಪಿ ನಾಯಕರು ಬೆದರಿಕೆ ಹಾಕಿದಾಗ ಪರಿಸ್ಥಿತಿ ಹದಗೆಟ್ಟಿತ್ತು” ಎಂದವರು ಹೇಳಿದ್ದಾರೆ.
“ ಈ ಮೊದಲು ಪಕ್ಷದ ನಾಯಕರನ್ನು ತೃಪ್ತಿಗೊಳಿಸುವುದಕ್ಕಾಗಿ ಡಿಎಂ ಎ.ಕೆ.ಸಿಂಗ್ ರನ್ನು ವರ್ಗಾವಣೆಗೊಳಿಸಲಾಗಿತ್ತು. ಇದೀಗ ಕೆಲ ರಾಜಕಾರಣಿಗಳ ಅಹಂಕಾರಕ್ಕೆ ಮತ್ತೋರ್ವ ಅಧಿಕಾರಿಯನ್ನು ಬಲಿಪಶು ಮಾಡಲಾಗಿದೆ” ಎಂದು ರೈತ ಭರತ್ ಭೂಷಣ್ ತ್ಯಾಗಿ ಹೇಳಿದ್ದಾರೆ.
ವರ್ಗಾವಣೆ ಆದೇಶದ ಕುರಿತಂತೆ ಪ್ರತಿಕ್ರಿಯಿಸಿದ್ದ ಶ್ರೇಷ್ಠ ಠಾಕೂರ್, “ಎಲ್ಲೇ ಹೋದರೂ ಬೆಳಕು ಪ್ರಕಾಶವನ್ನು ನೀಡುತ್ತದೆ. ಅದಕ್ಕೆ ಸ್ವಂತವಾದ ನೆಲೆಯಿಲ್ಲ. ಗೆಳೆಯರೇ ಚಿಂತಿಸಬೇಡಿ. ನಾನು ಸಂತೋಷವಾಗಿದ್ದೇನೆ. ನನ್ನ ಒಳ್ಳೆಯ ಕೆಲಸಗಳಿಗೆ ಸಿಕ್ಕ ಪ್ರತಿಫಲವಾಗಿ ನಾನಿದನ್ನು ಸ್ವೀಕರಿಸುತ್ತೇನೆ” ಎಂದಿದ್ದರು.