ಕುಂಬಳೆ: ಕಾರಿನಲ್ಲಿ ಬಂದ ತಂಡದಿಂದ ಅಂಗಡಿ ಮಾಲಕನಿಗೆ ಇರಿತ
ಮಂಜೇಶ್ವರ, ಜು. 3: ಕಾರಿನಲ್ಲಿ ಬಂದ ತಂಡ ಬೆಳಕು ಮತ್ತು ಧ್ವನಿ ಸಂಸ್ಥೆಯನ್ನು ಹಾನಿಗೊಳಿಸಿ, ಅದರ ಮಾಲಕನಾದ ಯೂತ್ ಲೀಗ್ ನೇತಾರನಿಗೆ ಇರಿದು ಗಾಯಗೊಳಿಸಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಕಾರ್ಯವೆಸಗುತ್ತಿರುವ ಗ್ಯಾಲಕ್ಸಿ ಲೈಟ್ ಆಂಡ್ ಸೌಂಡ್ ಸಂಸ್ಥೆಯ ಮಾಲಕ ಇಬ್ರಾಹಿಂ (39) ಗಾಯಗೊಂಡವರು ಎಂದು ಗುರುತಿಸಲಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರು ಯೂತ್ ಲೀಗ್‌ನ ಮೊಗ್ರಾಲ್ ಪುತ್ತೂರು ಸಮಿತಿಯ ಜೊತೆ ಕಾರ್ಯದರ್ಶಿಯಾಗಿದ್ದಾರೆ.
ಕಾರೊಂದರಲ್ಲಿ ಮಾರಕಾಯುಧಗಳೊಂದಿಗೆ ಬಂದ ತಂಡ ಇಬ್ರಾಹಿಂರ ಅಂಗಡಿಯ ಗಾಜುಗಳು, ಸೋಫಾ ಇತ್ಯಾದಿ ಸಾಮಗ್ರಿಗಳನ್ನು ಹೊಡೆದು ಹಾನಿಗೊಳಿಸಿದೆ. ಅದನ್ನು ತಡೆಯಲು ಇಬ್ರಾಹಿಂ ಮುಂದಾದಾಗ ಅಕ್ರಮಿಗಳ ತಂಡ ತಲ್ವಾರ್ ಬೀಸಿ ಅವರನ್ನು ಗಾಯಗೊಳಿಸಿದೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ತಂಡ ಪರಾರಿಯಾಗಿದೆ.
ಮೊಗ್ರಾಲ್ ಪುತ್ತೂರಿನಲ್ಲಿ ಅಕ್ರಮ ಮರಳು ಸಾಗಾಟ ವಿಷಯಕ್ಕೆ ಸಂಬಂಧಿಸಿ ಈ ಹಿಂದೆ ಘರ್ಷಣೆ ಉಂಟಾಗಿತ್ತು. ಅದರ ಮುಂದುವರಿಕೆಯಾಗಿ ದಾಳಿ ನಡೆಸಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಆಕ್ರಮಿಗಳು ಮತ್ತು ಅವರು ಬಂದ ಕಾರಿನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.